Advertisement

ರಾಷ್ಟ್ರಪತಿ ಭವನಕ್ಕೆ ಕಾರ್ಕಳದ ಶಿಲಾಮೂರ್ತಿಗಳು

11:52 PM Jan 06, 2020 | Sriram |

ಕರಿಕಲ್ಲ ನಾಡು ಕಾರ್ಕಳ ಶಿಲ್ಪಕಲೆಗೆ ಹೆಸರುವಾಸಿ. ಜಗತ್ತಿನಾದ್ಯಂತ ಇಲ್ಲಿನ ಕಲಾನೈಪುಣ್ಯದ ಅನೇಕ ಸಾಕ್ಷಿಗಳು ಕಾಣಸಿಗುತ್ತವೆ. ಇದಕ್ಕೆ ಮನ್ನಣೆ ಎಂಬಂತೆ ರಾಷ್ಟ್ರಪತಿ ಭವನದಲ್ಲೂ ಇದೀಗ ಕಾರ್ಕಳದ ಶಿಲಾಮೂರ್ತಿಗಳು ಸ್ಥಾಪಿತವಾಗಲಿವೆ.

Advertisement

ವಿಶೇಷ ವರದಿ-  ಕಾರ್ಕಳ: ಶಿಲ್ಪಕಲೆ ಕಾರ್ಕಳದ ಜೀವಾಳ. ಇಲ್ಲಿ ನಿರ್ಮಾಣವಾದ ಅದೆಷ್ಟೋ ಶಿಲಾಪ್ರತಿಮೆಗಳು ದೇಶ, ವಿದೇಶದ ಹಲವಾರು ದೇಗುಲಗಳಲ್ಲಿ ಪ್ರತಿಷ್ಠಾಪನೆಗೊಂಡು ಆರಾಧಿಸ್ಪಡುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಇಲ್ಲಿನ ಹತ್ತು ಶಿಲಾಮೂರ್ತಿಗಳು ರಾಷ್ಟ್ರಪತಿ ಭವನ ಅಲಂಕರಿಸಲು ಸಜ್ಜುಗೊಂಡಿವೆ. ಕಾರ್ಕಳ ಬೈಪಾಸ್‌ ರಸ್ತೆಯ ಹಿರಿಯ ಗಡಿಯ ಶಿಲ್ಪಗ್ರಾಮ ವಿಜಯ ಶಿಲ್ಪ ಶಾಲೆಯಲ್ಲಿ 10 ಶಿಲಾ ಮೂರ್ತಿಗಳು ಸಿದ್ಧಗೊಂಡಿದ್ದು, ದಿಲ್ಲಿಯತ್ತ ಸಾಗಲು ಅಣಿಯಾಗಿವೆ.

2 ಅಡಿ ಎತ್ತರ
ಮಹಾಭಾರತದ ದೃಶ್ಯವೊಂದನ್ನು ಕೆತ್ತಲಾಗಿರುವ ಮೂರ್ತಿ, ಭಗವಾನ್‌ ಶ್ರೀ ಬಾಹುಬಲಿ, ಹಿರಿಯಂಗಡಿ ಬಸದಿಯ ಮಾನಸ್ತಂಭ ಪ್ರತಿಕೃತಿ, ವರಕವಿ ಮುದ್ದಣ, ನಾಗರಾಜ- ನಾಗರಾಣಿ, ಸೋಮೇಶ್ವರ ಸ್ತಂಭ, ಗಜ-ಸಿಂಹ, ಗೇಟ್‌ ವೇ, ಕಲ್ಲಿನ ಕಾರಂಜಿ, ಚೆನ್ನಕೇಶವ ಹೀಗೆ ಒಟ್ಟು 10 ಮೂರ್ತಿಗಳು ನಿರ್ಮಾಣವಾಗಿವೆ. ಸರಿಸುಮಾರು 2 ಅಡಿಯಿದ್ದು, ನೆಲ್ಲಿಕಾರು ಕೃಷ್ಣಶಿಲೆಯಿಂದ ರಚಿಸಲ್ಪಟ್ಟಿವೆ. ಜ.10 ರಂದು ಈ ಮೂರ್ತಿಗಳು ದಿಲ್ಲಿಗೆ ಸಾಗಲಿವೆ.

ವಿದೇಶದಲ್ಲೂ ಕಾರ್ಕಳದ ಶಿಲೆ
ಸುಮಾರು 15 ವರ್ಷಗಳ ಹಿಂದೆ ಜಪಾನ್‌ನಲ್ಲಿ ಸ್ಥಾಪನೆಯಾದ ಸುಮಾರು ಮೂರುವರೆ ಅಡಿ ಎತ್ತರದ ಅವಲೋಕಿತೇಶ್ವರ ಪ್ರತಿಮೆ, ಟೊರೆಂಟೋದ ದೇವೇಂದ್ರನ ವಿಗ್ರಹ, ಇಂಗ್ಲೆಂಡ್‌ನ‌ಲ್ಲಿ ವಸ್ತು ಸಂಗ್ರಹಾಲಯದಲ್ಲಿರುವ ಶ್ರೀಕೃಷ್ಣನ ಪ್ರತಿಮೆ, ಮಲೇಷ್ಯಾದಲ್ಲಿರುವ ಮೂಕಾಂಬಿಕೆಯ ಮೂರ್ತಿ, ಇಟಲಿಯ ಈಶ್ವರ ಮತ್ತು ಆಂಜನೇಯನ ವಿಗ್ರಹ ಇದೇ ಶಿಲ್ಪಗ್ರಾಮದಲ್ಲಿ ಕೆತ್ತೆನೆಯಾದವುಗಳು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ದೆಹಲಿಯ ಅಹಿಂಸಾ ಸ್ಥಳ್‌ದಲ್ಲಿ ಪ್ರತಿಷ್ಠಾಪನೆಯಾದ ಪದ್ಮಾಸನ ಭಂಗಿಯಲ್ಲಿರುವ ಮಹಾವೀರನ ಪ್ರತಿಮೆ, ರಾಜಸ್ಥಾನದ ಅಲ್ವಾರ್‌ ಜಿಲ್ಲೆಯಲ್ಲಿನ ಚಂದ್ರಪ್ರಭಾ ತೀರ್ಥಂಕರರ ಪ್ರತಿಮೆ, ರಿಲಾಯನ್ಸ್‌ನ ಮುಖೇಶ್‌ ಅಂಬಾನಿಯು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಅರ್ಪಿಸಿದ ಶಿವೇಲಿ ಮಂಟಪದ ಸುಮಾರು 25 ಅಡಿ ಎತ್ತರವುಳ್ಳ ಸ್ತಂಭ ಚತುಷ್ಠಯಗಳು ಕೆತ್ತಿದ ಕೀರ್ತಿ ಶಿಲ್ಪಗ್ರಾಮದ್ದು.

Advertisement

ರಾಷ್ಟ್ರಪ್ರಶಸ್ತಿ ಪುರಸ್ಕೃತರು
ರಾಷ್ಟ್ರಪತಿ ಭವನಕ್ಕೆ ತೆರಳಲಿರುವ ಶಿಲ್ಪಗಳನ್ನು ಕೆತ್ತಿದವರು ಶಿಲ್ಪಗ್ರಾಮದ ಸಂಸ್ಥಾಪಕ ಕೆ. ಶಾಮರಾಯ ಆಚಾರ್ಯ ಅವರು. 2004ರಲ್ಲಿ ಇವರಿಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಅಂದಿನ ಉಪರಾಷ್ಟ್ರಪತಿ ಬೈರೋನ್‌ ಸಿಂಗ್‌ ಶೇಖಾವತ್‌ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ರಾಜ್ಯ ಪ್ರಶಸ್ತಿ, ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತಾರು ಪ್ರಶಸ್ತಿಗಳಿಂದ ಸಮ್ಮಾನಿಸಲ್ಪಟ್ಟಿರುತ್ತಾರೆ. ರಾಜ್ಯ ಸರಕಾರದ ಶಿಲ್ಪಕಲಾ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾಗಿ ನೇಮಕಗೊಂಡಿದ್ದ ಇವರು ನೂರಾರು ಮಂದಿಗೆ ಶಿಲ್ಪಶಾಸ್ತ್ರ ಸಹಿತವಾದ ತರಬೇತಿ ನೀಡಿ, ಸಾಂಪ್ರದಾಯಿಕ ಶಿಲ್ಪಿಗಳನ್ನಾಗಿ ರೂಪಿಸಿದ್ದಾರೆ. ಇವರ ವಿದ್ಯಾರ್ಥಿಗಳು ಶಿಲ್ಪಕಲಾ ವೃತ್ತಿಯನ್ನು ಮಾಡಿಕೊಂಡು ಶಿಲ್ಪಕಲಾ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ಟೊರೆಂಟೋದ ದೇವೇಂದ್ರನ ವಿಗ್ರಹ, ಇಂಗ್ಲೆಂಡ್‌ನ‌ಲ್ಲಿ ವಸ್ತು ಸಂಗ್ರಹಾಲಯದಲ್ಲಿರುವ ಶ್ರೀಕೃಷ್ಣನ ಪ್ರತಿಮೆ, ಮಲೇಷ್ಯಾದಲ್ಲಿರುವ ಮೂಕಾಂಬಿಕೆಯ ಮೂರ್ತಿ, ಇಟಲಿಯ ಈಶ್ವರ ಮತ್ತು ಆಂಜನೇಯನ ವಿಗ್ರಹ ಇದೇ ಶಿಲ್ಪಗ್ರಾಮದಲ್ಲಿ ಕೆತ್ತೆನೆಯಾಗಿವೆ.

ರಾಷ್ಟ್ರಪತಿ ಭವನಕ್ಕೆ ಶಿಲ್ಪಗಳನ್ನು ಕೆತ್ತಿದ ಕೆ.ಸತೀಶ್‌ ಆಚಾರ್ಯ ಕಳೆದ 36 ವರ್ಷಗಳಿಂದ ಶಿಲ್ಪಗಳನ್ನು ಕೆತ್ತುತ್ತಿದ್ದಾರೆ.

ಶಿಲ್ಪಕಲೆಗೊಂದು ವಿ.ವಿ. ಬೇಕು
ಕಾರ್ಕಳ ಎಂದಾಗಲೇ ನೆನಪಾಗುವುದು ಶಿಲ್ಪಕಲೆ. ಬಾಹುಬಲಿ ಬೆಟ್ಟದಲ್ಲಿರುವ 43 ಅಡಿ ಎತ್ತರದ ಶ್ರೀ ಬಾಹುಬಲಿ ವಿಗ್ರಹ, ಹಿರಿಯಂಗಡಿಯ ಮಾನಸ್ತಂಭ, ಶಿಲೆಯಲ್ಲೇ ನಿರ್ಮಾಣವಾದ ಹಲವಾರು ಬಸದಿಗಳು ಇಲ್ಲಿವೆ. ಇದರ ವೀಕ್ಷಣೆ ಮತ್ತು ಅಧ್ಯಯನಕ್ಕಾಗಿ ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು, ವಿದ್ಯಾರ್ಥಿಗಳು ಕಾರ್ಕಳಕ್ಕೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಕಳದಲ್ಲೊಂದು ಶಿಲ್ಪಕಲಾ ವಿಶ್ವವಿದ್ಯಾನಿಲಯ, ವಸ್ತುಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣವಾಗಬೇಕೆಂಬುದು ಹಲವರ ಅಭಿಪ್ರಾಯ.

ಕೃಷ್ಣಶಿಲೆಯಲ್ಲಿ ಕೆತ್ತನೆ
ಪಾರಂಪರಿಕವಾಗಿ ಬಂದಿರುವ ಶಿಲ್ಪಕಲೆಯಲ್ಲಿ ನಾನು ತೊಡಗಿಕೊಂಡು 36 ವರ್ಷಗಳಾದವು. ರಾಷ್ಟ್ರಪತಿ
ಭವನಕ್ಕಾಗಿ ನಿರ್ಮಾಣವಾದ ಮೂರ್ತಿಗಳನ್ನು ನೆಲ್ಲಿಕಾರು ಕೃಷ್ಣಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ.
– ಕೆ. ಸತೀಶ್‌ ಆಚಾರ್ಯ,ವಿಜಯ ಶಿಲ್ಪಶಾಲಾ, ಶಿಲ್ಪಗ್ರಾಮ ಕಾರ್ಕಳ

ನಮ್ಮ ಹೆಮ್ಮೆ
ನೈಸರ್ಗಿಕವಾಗಿ ಹೇರಳ ಶಿಲಾಸಂಪತ್ತು ಹೊಂದಿರುವ ಕಾರ್ಕಳ ಐತಿಹಾಸಿಕವಾಗಿ ಹಲವು ಪ್ರಸಿದ್ಧ ಶಿಲಾಮಯ ದೇಗುಲ, ಬಸದಿ ಹಾಗೂ ಬೃಹತ್‌ ಏಕಶಿಲ
ವಿಗ್ರಹದ ರಚನೆಗಳಿಂದಲೂ ಪ್ರಸಿದ್ಧ. ಇಲ್ಲಿನ ಶಿಲಾಮೂರ್ತಿಗಳು ದೇಶ, ವಿದೇಶದ
ಹಲವಾರು ದೇಗುಲಗಳಲ್ಲಿ ಪ್ರತಿಷ್ಠಾಪನೆಗೊಂಡಿರುವುದು ಕಾರ್ಕಳದ ಹೆಮ್ಮೆ.
-ಜಿ.ಪಿ. ಪ್ರಭು, ಕೆನರಾ ಬ್ಯಾಂಕ್‌ ಸಿಇ ಕಾಮತ್‌ ಕುಶಲ ಕರ್ಮಿಗಳ ತರಬೇತಿ ಸಂಸ್ಥೆ, ಮಿಯ್ಯಾರು

ಸ್ಮರಣೀಯ
ಪ್ರಪಂಚದ ಯಾವುದೇ ನಾಗರಿಕ ಸಮಾಜದಲ್ಲಿ ಶಿಲ್ಪಕಲೆಯೆಂಬುದು ಸಾಮಾಜಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಜಗತ್ತಿನ ಪ್ರತಿಯೊಂದು ಕಡೆಯೂ ಅದರದ್ದೇ ಆದ ಶೈಲಿಯ ಶಿಲ್ಪಕಲೆ ರೂಪುಗೊಂಡಿರುವುದು. ಕರ್ನಾಟಕ ಶಿಲ್ಪಕಲಾ ಪರಂಪರೆಯಲ್ಲಿ ಕಾರ್ಕಳದ ಕೊಡುಗೆ ಅಪಾರವಾದುದು ಮತ್ತು ಸ್ಮರಣೀಯವಾದುದು.
-ಗುಣವಂತೇಶ್ವರ ಭಟ್‌,
ರಾಜ್ಯಪ್ರಶಸ್ತಿ ವಿಜೇತ ಶಿಲ್ಪಕಲಾ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next