ರಾಜ್ಯದೆಲ್ಲೆಡೆ ವ್ಯಂಗ್ಯಚಿತ್ರಕಾರರು ಪ್ರದರ್ಶನ, ಶಿಬಿರ, ಸ್ಪರ್ಧೆ, ಪುಸ್ತಕ ಬಿಡುಗಡೆ ಮುಂತಾದ ನಾನಾ ಚಟುವಟಿಕೆಗಳಿಂದ ಕ್ರಿಯಶೀಲರಾಗಿದ್ದ ವರ್ಷ 2017 . ಡಿಸೆಂಬರ್ ಕೊನೆಯ ಎರಡು ದಿನಗಳು ಕದ್ರಿ ಪಾರ್ಕಿನಲ್ಲಿ ಜರುಗಿದ “ಕಾರ್ಟೂನ್ ಫೆಸ್ಟ್’ ಅದಕ್ಕೆ ಪೂರ್ಣವಿರಾಮ ಹಾಕಿತು. ಮನರಂಜನೆಯ ದೃಷ್ಟಿಯಿಂದ ಈ ಕಾರ್ಟೂನ್ ಫೆಸ್ಟ್ ಜನಾಕರ್ಷಣೆಯ ಕೇಂದ್ರವಾಯಿತು.
ಕರಾವಳಿ ಉತ್ಸವದ ಸಲುವಾಗಿ ಏರ್ಪಡಿಸಿದ ಈ ಪ್ರದರ್ಶನ ವಿಶೇಷ ಮೆರುಗನ್ನೀಯಲು ಎರಡು ಕಾರಣಗಳಿದ್ದವು. ಮೊದಲನೆಯದು ವ್ಯಂಗ್ಯಚಿತ್ರ ಪ್ರದರ್ಶನದ ಪಕ್ಕದಲ್ಲೇ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ಸವಿಯಲು ಬಂದ ಪ್ರೇಕ್ಷಕರ ಭೇಟಿ. ಎರಡನೆಯದು ಸ್ಥಳದಲ್ಲೇ ವ್ಯಂಗ್ಯಭಾವಚಿತ್ರ ರಚನೆ. ಹರಿಣಿಯವರಿಂದ ಥಟ್ಟನೆ ಮೂಡುತ್ತಿರುವ ವಾರೆ ಗೆರೆಗಳ ಮುಖಗಳಿಗೆ ಹೆಚ್ಚಾಗಿ ಮಕ್ಕಳು ಮುಗಿಬಿದ್ದರು. ಸಹೋದರ ಜೀವನ್ ಶೆಟ್ಟಿ ಕೂಡ ಸಾಥ್ ಕೊಟ್ಟರು.
ರಾಜ್ಯದ ವ್ಯಂಗ್ಯಚಿತ್ರಕಾರರಿಂದ ಕರಾವಳಿಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಿಂಬಿಸುವ ವ್ಯಂಗ್ಯಚಿತ್ರಗಳನ್ನು ಪ್ರದರ್ಶನದ ಸಂಘಟಕ ಜಾನ್ ಚಂದ್ರನ್ ಆಹ್ವಾನಿಸಿದ್ದರು. ಅದರ ಜತೆಗೆ ಹವಾಮಾನ ವೈಪರೀತ್ಯ ಮತ್ತು ಕರಾವಳಿ ಪ್ರದೇಶದ ಖ್ಯಾತನಾಮರ ಕ್ಯಾರಿಕೇಚರ್ಗಳೂ ಪ್ರದರ್ಶಿಸಲ್ಪಟ್ಟವು.
ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ, ಹರಿಣಿ, ಜೀವನ್, ಜೇಮ್ಸ್ ವಾಜ್, ಜಾನ್ ಚಂದ್ರನ್, ಜಿ.ಎಸ್. ನಾಗನಾಥ್, ಶೈಲೇಶ್ ಉಜಿರೆ, ಯತಿ ಸಿದ್ಧಕಟ್ಟೆ, ಅಮೃತ್ ವಿಟ್ಲ, ಏಕನಾಥ್ ಬೊಂಗಾಳೆ, ವೆಂಕಟ್ ಭಟ್ ಎಡನೀರು, ನಂಜುಂಡಸ್ವಾಮಿ, ಗೋಪಿ ಹಿರೇಬೆಟ್ಟು, ಎಸ್ಸಾರ್ ಪುತ್ತೂರು, ಶ್ರೀಧರ್ ಕೋಮರವಳ್ಳಿ, ರಂಗನಾಥ್ ಸಿದ್ಧಾಪುರ, ರಾಮಪ್ರಸಾದ್ ಭಟ್ ಮತ್ತು ರಮೇಶ್ ಚಂಡೆಪ್ಪನವರ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇವರ ನೂರಕ್ಕೂ ಅಧಿಕ ಕಾರ್ಟೂನ್ಗಳು ಸುಮಾರು 700 ಚದರ ಅಡಿ ವ್ಯಾಪ್ತಿಯಲ್ಲಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದವು. ಅಭಿಮಾನಿಗಳು ತಮ್ಮ ಮೆಚ್ಚಿನ ವ್ಯಂಗ್ಯಚಿತ್ರಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಪಟ್ಟರು.ಹಾಸ್ಯನಟ ನವೀನ್ ಡಿ. ಪಡೀಲ್ ತಮ್ಮ ತಂಡದೊಂದಿಗೆ ಭೇಟಿ ನೀಡಿ ಕಾಟೂìನ್ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕದ್ರಿ ಪಾರ್ಕಿಗೆ ವಾಕಿಂಗ್, ಜಾಗಿಂಗ್, ವಿಹಾರಕ್ಕೆ ಬರುವ ಜನ ಮತ್ತು ಪಿಕ್ನಿಕ್ ಬರುವ ಶಾಲಾ ಮಕ್ಕಳು ನಗೆ ಗೆರೆಗಳನ್ನು ಉತ್ಸಾಹದಿಂದ ವೀಕ್ಷಿಸಿ ಆಸ್ವಾದಿಸಿದ್ದು, ಈ ನಿಟ್ಟಿನಲ್ಲಿ ಕಾಟೂìನ್ ಫೆಸ್ಟ್ ಯಶಸ್ವಿಯಾಗಿದೆ ಎನ್ನಬಹುದು. ದೈನಂದಿನ ಬದುಕಿನ ಜಂಜಡಗಳಿಂದ ಒಂದು ಕ್ಷಣ ರಿಫ್ರೆಶ್ ಆಗಿಸುವ ವ್ಯಂಗ್ಯಚಿತ್ರಕಲೆಗೆ ಮುಕ್ತ ವೇದಿಕೆ ಒದಗಿಸಿದ ಕರಾವಳಿ ಉತ್ಸವದ ಸಂಘಟಕ ಮಂಜುನಾಥ ಮತ್ತು ತಂಡ ಶ್ಲಾಘನೀಯರು.
ವಿನ್ಯಾಸ್