Advertisement

ಅನುಮತಿ ವಿನಾ ಕಾರ್ಟೂನ್‌ ಬಳಕೆ : ದೂರು

09:40 AM Mar 31, 2018 | Karthik A |

ಕುಂದಾಪುರ: ತಾನು ರಚಿಸಿದ ವ್ಯಂಗ್ಯಚಿತ್ರವನ್ನು ಅನುಮತಿ ವಿನಾ ರಾಜಕೀಯ ಉದ್ದೇಶಕ್ಕಾಗಿ ಬಳಸಿದ್ದರ ವಿರುದ್ಧ ‘ನೇಶನ್‌ ವಿತ್‌ ನಮೋ’ ಫೇಸ್‌ಬುಕ್‌ ಪೇಜ್‌ ವಿರುದ್ಧ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ದೂರು ನೀಡಿದ್ದಾರೆ. ‘ನೇಶನ್‌ ವಿತ್‌ ನಮೋ’ ಪೇಜ್‌ನಲ್ಲಿ ತಾನು ರಚಿಸಿದ ಅಪಾರ ಜನಮೆಚ್ಚುಗೆ ಪಡೆದ ‘ಕಾಂಗ್ರೆಸ್‌ ಮುಕ್ತ್ ಭಾರತ್‌’ ವ್ಯಂಗ್ಯಚಿತ್ರವನ್ನು ತನ್ನ ಅನುಮತಿ ಪಡೆಯದೆ, ಹೆಸರನ್ನೂ ಅಳಿಸಿ ಪ್ರಕಟಿಸಲಾಗಿದೆ ಎಂದು ಸತೀಶ್‌ ಆಚಾರ್ಯ ದೂರಿನಲ್ಲಿ ತಿಳಿಸಿದ್ದಾರೆ. ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಪತನ ನೋಡಲು ನಿಮಗೆ ಹಾರ್ದಿಕ ಸ್ವಾಗತ. ದಿನಾಂಕ ನೆನಪಿಟ್ಟುಕೊಳ್ಳಿ. ಮತದಾನ ದಿನ ಮೇ 12. ಫಲಿತಾಂಶ ದಿನ ಮೇ 15’ ಎಂದು ಕಾರ್ಟೂನ್‌ನ ಮೇಲ್ಭಾಗದಲ್ಲಿ ಪ್ರಕಟಿಸಲಾಗಿದೆ.

Advertisement

ಕಾರ್ಟೂನನ್ನು ತೆಗೆಯುವಂತೆ ಸತೀಶ್‌ ಆಚಾರ್ಯ ಸಂಬಂಧಪಟ್ಟ ಪೇಜ್‌ನವರಿಗೆ ಸಂದೇಶ ಕಳುಹಿಸಿದ್ದರು. ಅಲ್ಲಿಂದ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಶುಕ್ರವಾರ ಫೇಸ್‌ಬುಕ್‌ನ ಇಂಟಲೆಕ್ಚವಲ್‌ ಪ್ರಾಪರ್ಟಿ ವಿಭಾಗಕ್ಕೆ ದೂರು ನೀಡಿದ್ದಾರೆ. ಅಲ್ಲಿಂದ ಇದನ್ನು ಪರಾಮರ್ಶಿಸುವುದಾಗಿ ಉತ್ತರ ಬಂದಿದೆ.

‘ಈ ಹಿಂದೆ ಕಾಂಗ್ರೆಸ್‌ ಪಕ್ಷವೂ ನನ್ನ ಒಪ್ಪಿಗೆ ಇಲ್ಲದೆ ಬೇರೊಂದು ಕಾರ್ಟೂನ್‌ ಬಳಸಿಕೊಂಡಿತ್ತು. ಆಗಲೂ ಪ್ರಶ್ನಿಸಿದ್ದೆ. ಈಗ ನಮೋ ಪೇಜ್‌ನವರು ಬಳಸಿಕೊಂಡಿದ್ದಾರೆ. ಕಾರ್ಟೂನ್‌ ಸಿಂಡಿಕೇಟ್‌ಗೆ ಬರೆದ ಈ ವ್ಯಂಗ್ಯಚಿತ್ರ ಸ್ಟಾರ್‌ ಆಫ್ ಮೈಸೂರು, ಭೋಪಾಲ್‌ನ ಸುಬಹ್‌ ಸವೇರೆ, ದಾವಣಗೆರೆಯ ಜನತಾವಾಣಿ ಮೊದಲಾದವುಗಳಲ್ಲಿ ಪ್ರಕಟವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next