ಮುಂಬಯಿ: ದ್ವಿಚಕ್ರ ವಾಹನ, ಕಾರು ಖರೀದಿಯ ಇಚ್ಛೆಯಿದ್ದರೆ ಮಾಸಾಂತ್ಯದ ಮೊದಲೇ ಪೂರೈಸಿಕೊಳ್ಳಿ. ಜೂ. 1ರಿಂದ ಥರ್ಡ್ ಪಾರ್ಟಿ ವಿಮೆ ಮೊತ್ತ ದಲ್ಲಿ ಏರಿಕೆಯಾಗಲಿದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ರಿಯಾಯಿತಿ ನೀಡಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಪರಿಷ್ಕೃತ ವಿಮಾ ದರದ ಪ್ರಕಾರ 1,000 ಸಿಸಿ ವರೆಗಿನ ಕಾರುಗಳ ವಾರ್ಷಿಕ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರದಲ್ಲಿ 22 ರೂ. ಹೆಚ್ಚಳವಾಗಲಿದ್ದು, 2,094 ರೂ.ಗಳಾಗಲಿವೆ. 1,000ದಿಂದ 1,500 ಸಿಸಿವರೆಗಿನ ಖಾಸಗಿ ಕಾರುಗಳ ಪ್ರೀಮಿಯಂ ಶೇ. 6ರಷ್ಟು ಹೆಚ್ಚಳವಾಗಲಿದೆ. ಈ ಕಾರುಗಳ ಕಂತು 195 ರೂ. ಹೆಚ್ಚಳವಾಗಿ 3,416 ರೂ.ಗಳಾಗಲಿದೆ. 1,500 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಕಾರುಗಳ ಪ್ರೀಮಿಯಂ ದರದಲ್ಲಿ 7 ರೂ. ಇಳಿಕೆ ಆಗಲಿದೆ.
75 ಸಿಸಿವರೆಗಿನ ದ್ವಿಚಕ್ರ ವಾಹನಗಳ ಪ್ರೀಮಿಯಂ ದರ 538 ರೂ.ಗಳಿಗೆ, 75ರಿಂದ 150 ಸಿಸಿವರೆಗಿನವುಗಳ ದರ 714 ರೂ.ಗಳಿಗೆ, 150ರಿಂದ 350 ಸಿಸಿ ವರೆಗಿನವುಗಳ ದರ 1,366 ರೂ.ಗಳಿಗೆ ಮತ್ತು 350 ಸಿಸಿಗಿಳಿಗಿಂತ ಹೆಚ್ಚಿನ ದ್ವಿಚಕ್ರ ವಾಹನಗಳ ವಿಮಾ ಪ್ರೀಮಿಯಂ 2,804 ರೂ.ಗಳಿಗೆ ಹೆಚ್ಚಳವಾಗಲಿದೆ.
ವಿನಾಯಿತಿ ಇದೆ :
ಹೈಬ್ರಿಡ್ ವಾಹನಗಳಿಗೆ ವಿಮೆ ಮೊತ್ತದಲ್ಲಿ ಶೇ. 7.5 ವಿನಾಯಿತಿ ನೀಡಲಾಗಿದೆ. 30 ಕೆ.ವಿ.ಗಳಿಗೆ ಮೀರದ ವಿದ್ಯುತ್ ವಾಹನಗಳಿಗೆ 1,780 ರೂ. ಪ್ರೀಮಿಯಂ, 30 ಕೆ.ವಿ.ಗಳಿಂದ 65 ಕೆ.ವಿ. ಸಾಮರ್ಥ್ಯದ ವಾಹನಗಳಿಗೆ 2,904 ರೂ. ಪ್ರೀಮಿಯಂ ನೀಡಬೇಕು. ಹಾಗೆಯೇ ಶಾಲಾ ವಾಹನಗಳು, ವಿಂಟೇಜ್ ಕಾರುಗಳ ವಿಮಾ ಮೊತ್ತದಲ್ಲಿ ರಿಯಾಯಿತಿ ನೀಡಲಾಗಿದೆ.