ಧಾರವಾಡ: ಉದ್ಯೋಗ ಅರಸಿ ಬರುವ ಜನರನ್ನು ಸರಕು ಸಾಗಾಣಿಕೆ ಹಾಗೂ ಕಟ್ಟಡ ಸಾಮಗ್ರಿಗಳ ಸಾಗಾಣಿಕೆ ವಾಹನಗಳಲ್ಲಿ ಕೊಂಡೊಯ್ಯುವುದು ಅಪರಾಧ ಎಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಡಿಸಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂತಹವರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಚಾಲಕರ-ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.
ಸರಕು ವಾಹನದಲ್ಲಿ ಜನರನ್ನು ಸಾಗಿಸುವಾಗ ಯಾವುದೇ ರೀತಿ ಅಪಘಾತವಾದರೆ ತೊಂದರೆಗೀಡಾದವರಿಗೆ ಯಾವುದೇ ರೀತಿಯ ವಿಮೆ, ಪರಿಹಾರ ಸಿಗಲ್ಲ. ಆದ್ದರಿಂದ ಈ ನಿಯಮ ಬಾಹಿರ ಪ್ರಯಾಣವನ್ನು ನಿರ್ಬಂಧಿಸಬೇಕು ಎಂದರು.
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿಂದ ಕೂಡಿದ ತಾಲೂಕು ಮಟ್ಟದ ರಸ್ತೆ ಸುರಕ್ಷತಾ ಸಮಿತಿ ರಚಿಸಬೇಕು. ಪ್ರತಿ ಗ್ರಾಮ, ಬಸ್‌ನಿಲ್ದಾಣ, ರೈಲು ನಿಲ್ದಾಣ, ಪಂಚಾಯಿತಿ ಆವರಣ, ಸಮುದಾಯ ಭವನಗಳು ಸೇರಿದಂತೆ ಹೆಚ್ಚು ಜನಸಂದಣಿ ಇರುವ, ಕೂಲಿಕಾರ್ಮಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಈ ಕುರಿತು ಜನಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಬೀದಿನಾಟಕ, ಗೋಡೆಬರಹ, ಪೋಸ್ಟರ್, ವಿಡಿಯೋಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ, ಸರಕು ಸಾಗಾಣಿಕೆ ವಾಹನದಲ್ಲಿನ ಪ್ರಯಾಣ ಕ್ಷೇಮಕರವಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಬೇಕು ಎಂದರು.
ಇಂತಹ ನಿಯಮ ಬಾಹಿರ ಅಪಾಯಕರವಾದ ಜನರ ಸಾಗಾಣಿಕೆ ಕುರಿತು ಮಾಹಿತಿ ನೀಡಲು ಪ್ರತ್ಯೇಕ ದೂರವಾಣಿ ಮತ್ತು ವಾಟ್ಸ್‌ಆ್ಯಪ್ ನಂಬರನ್ನು ಸಾರ್ವಜನಿಕರಿಗೆ ನೀಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಡಾ| ಬಿ.ಸಿ.ಸತೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧಿಧೀಶ ಆರ್.ಎಸ್. ಚಿಣ್ಣನ್ನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಮಹಾನಗರ ಉಪ ಪೊಲೀಸ್ ಆಯುಕ್ತ ಡಾ|ಶಿವಕುಮಾರ ಗುಣಾರೆ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಮಾತನಾಡಿದರು. ಡಿವೈಎಸ್‌ಪಿ ಗುರು ಮತ್ತೂರು, ಕಾರ್ಮಿಕ ಇಲಾಖೆ ಅಧಿಕಾರಿ ತರಣಮ್ ಬಂಗಾಲಿ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಉಪ ನಿರ್ದೇಶಕ ರಾಜೇಶ, ಸಾ.ಶಿ. ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ಇದ್ದರು.