Advertisement

ಆವಿಷ್ಕಾರದೊಂದಿಗೆ ಸಂಶೋಧನೆ ಕೈಗೊಳ್ಳಿ

09:53 AM Jul 16, 2019 | Suhan S |

ಬೆಳಗಾವಿ: ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಮಾನವ ಸಂಪನ್ಮೂಲಗಳನ್ನು ಸೃಷ್ಟಿಸುವುದಲ್ಲದೆ ತಾಂತ್ರಿಕತೆಯ ಬೆಳವಣಿಗೆಯೊಂದಿಗೆ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸಂಶೋಧನೆ ಕೈಗೊಳ್ಳುವುದರ ಜೊತೆಗೆ ಉದ್ದಿಮೆಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯೋನ್ಮುಖರಾಗಬೇಕು ಎಂದು ಕಾನಪುರದ ಐಐಟಿ ಪ್ರಾಧ್ಯಾಪಕ ಡಾ| ಅನೀಶ ಉಪಾಧ್ಯಾಯ ಹೇಳಿದರು.

Advertisement

ನಗರದ ಕೆಎಲ್ಇಯ ಡಾ| ಎಂ.ಎಸ್‌. ಶೇಷಗಿರಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ನಾಲಜಿ ಆ್ಯಂಡ್‌ ಎಂಟರ್‌ ಪ್ರಿನರ್‌ಶಿಪ್‌ ಅವೇರನೆಸ್‌ ಆನ್‌ ಇಂಡಸ್ಟ್ರೀಯಲ್ ಮೈಕ್ರೋವೇವ್‌ ಹೀಟಿಂಗ್‌ ವಿಷಯ ಕುರಿತು ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರವು ಪ್ರಾಧ್ಯಾಪಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗೌರವಾನ್ವಿತ ಅತಿಥಿ ಎನರ್ಜಿ ಮೈಕ್ರೊವೇವ್‌ ಸಿಸ್ಟಮನ್‌ ಮುಖ್ಯಸ್ಥ ಡಾ| ಪ್ರಕಾಶ ಮುಗಳಿ ಮಾತನಾಡಿ, ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಒಂದೇ ವಿಭಾಗಕ್ಕೆ ಅಂಟಿಕೊಳ್ಳದೇ ಅಂತರ ವಿಭಾಗ ಶಿಕ್ಷಣ ಪಡೆಯುವುದರೊಂದಿಗೆ ವಿವಿಧ ವಿಭಾಗದ ಪ್ರೊಜೆಕ್ಟ್ಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಬಸವರಾಜ ಕಟಗೇರಿ ಮಾತನಾಡಿ, ಮೈಕ್ರೊವೇವ್‌ ಹೀಟಿಂಗ್‌ ವ್ಯವಸ್ಥೆಯು ಆಧುನಿಕ ತಂತ್ರಜ್ಞಾನವಾಗಿದೆ. ಅದರ ಕಾರ್ಯಕ್ಷಮತೆ ಹಾಗೂ ಉಪಯೋಗಗಳ ಬಗ್ಗೆ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಪ್ರಾಧ್ಯಾಪಕರು ತಿಳಿದುಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ವಿಭಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಓಡಿಸಾ ರಾಜ್ಯದ ಬಿಜು ಪಟ್ನಾಯಿಕ ತಾಂತ್ರಿಕ ವಿಶ್ವವಿದ್ಯಾಲಯ, ಬಿಹಾರದ ಪಟ್ನಾದ ಆರ್ಯಭಟ ವಿಶ್ವಾವಿದ್ಯಾಲಯ ಹಾಗೂ ಬೆಳಗಾವಿಯ ಎನರ್ಜಿ ಮೈಕ್ರೊವೇವ್‌ ಸಿಸ್ಟಮ್‌ ಕಂಪನಿಯ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಡಾ| ರಾಜಶ್ರೀ ಕನಯ ಕಾರ್ಯಾಗಾರದ ರೂಪರೇಷೆ ವಿವರಿಸಿದರು. ರಾಜ್ಯದ ವಿವಿಧ ಮಹಾವಿದ್ಯಾಲಯಗಳ 60 ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next