ತಾವರಗೇರಾ: ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಎಂ. ಜಮಾದರ್ ಹೇಳಿದರು.
ಅವರು ಸಮೀಪದ ಮೆತ್ತಿನಾಳ ಹತ್ತಿರದ ರಮೇಶ ಬಳ್ಳೊಳ್ಳಿ ಅವರ ತೋಟದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಮಹಾವಿದ್ಯಾಲಯ ವಿಜಯಪುರ, ಕೃಷಿ ಇಲಾಖೆ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ಯೋಜನಾ ಅನುಷ್ಠಾನ ಪ್ರದೇಶದ ಹಿಡುವಳಿದಾರರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶೂನ್ಯ ಬಂಡವಾಳ ಕೃಷಿಯಲ್ಲಿ ಬೀಜಾಮೃತ, ಜೀವಾಮೃತ, ಘನ ಜೀವಾಮೃತ ವಿಧಾನವನ್ನು ಬಳಸಿಕೊಂಡು, ದೇಸಿ ಜಾನುವಾರುಗಳ ಸಗಣಿ, ಮೂತ್ರದಿಂದ ಉತ್ತಮ ಇಳುವರಿ ಪಡೆಯಲು ರೈತರು ಮುಂದಾಗಬೇಕು ಎಂದು ತಿಳಿಸಿದರು.
ವಿಜಯಪುರ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಡಾ| ಬಿ.ಎನ್. ಮೋಟಗಿ, ರೈತರ ಹಕ್ಕುಗಳು, ದೇಶಿ ತಳಿಗಳ ಕುರಿತು, ಸಹ ಸಂಶೋಧಕಿ ಡಾ| ರೇಣುಕಾ ಬಿರಾದರ ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿಯಲ್ಲಿ ಕೀಟ ಹಾಗೂ ರೋಗ ನಿರ್ವಹಣೆ, ಸಹಾಯಕ ಕೃಷಿ ಅಧಿಕಾರಿ ಯಲ್ಲಪ್ಪ ಗಿಟಗಿ ಸರ್ಕಾರದ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ರೈತರಿಗೆ ವಿವರಿಸಿದರು.
ರೈತರಾದ ಮಹಾಂತಮ್ಮ ಪೊಲೀಸಪಾಟೀಲ್, ಚಂದ್ರಶೇಖರ ಬಳೊಳ್ಳಿ, ಸಂತೋಷ ಸರನಾಡಗೌಡ್ರ, ಸಲೀಂ ನಾಯಕ್, ನೈಸರ್ಗಿಕ ಕೃಷಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಸಂಪನ್ಮೂಲ ವ್ಯಕ್ತಿಗಳಾದ ಸಗರಪ್ಪ ಮೂಲಿ, ಶರಣಪ್ಪ ಕುಂಬಾರ, ವಡಿಕೆಪ್ಪ ಮಾಲಿ ಪಾಟೀಲ್, ಪ್ರಗತಿಪರ ರೈತರಾದ ರುದ್ರಪ್ಪ ಅಕ್ಕಿ, ಮಹಾಂತೇಶ ಐಲಿ, ಶ್ಯಾಮಣ್ಣ ಸ್ಮಣಗಾರ ಸೇರಿದಂತೆ, ಮೆತ್ತಿನಾಳ, ಗಂಗನಾಳ ಗ್ರಾಮಗಳ ರೈತರು ಇದ್ದರು.
ಸಹ ಸಂಶೋಧಕಿ ಡಾ| ಗುರುದೇವಿ ಪ್ರಾಸ್ತಾವಿಕ ಮಾತನಾಡಿದರು. ಸಮುದಾಯ ಸಹಾಯಕ ವೀರೇಶ ಹೊಸಮನಿ ನಿರೂಪಿಸಿ, ವಂದಿಸಿದರು.