ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್‌ನ ರವಿವಾರ ನಡೆಯುವ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಮತ್ತು ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ.
ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನಿನ ಅಲ್ಕರಾಝ್ ಮತ್ತು ಅಮೆರಿಕದ ಫ್ರಾನ್ಸಿಸ್ ಟಿಯಾಫೋ ಸೆಣೆಸಿದರು. ಇಲ್ಲಿ ಅಲ್ಕರಾಝ್ ಗೆದ್ದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಕರೆನ್ ಕಚನೊವ್‌ರನ್ನು ಮಣಿಸಿ ಕ್ಯಾಸ್ಪರ್ ರೂಡ್ ಫೈನಲ್‌ಗೆ ಜಿಗಿದರು. ವಿಶೇಷವೆಂದರೆ ಬಹಳ ಕಾಲದ ಅನಂತರ ರಫೆಲ್ ನಡಾಲ್, ನೊವಾಕ್ ಜೊಕೋವಿಕ್, ರೋಜರ್ ಫೆಡರರ್ ಇಲ್ಲದ ಗ್ರ್ಯಾನ್‌ಸ್ಲಾಮ್ ಫೈನಲ್ ಒಂದು ನಡೆಯುತ್ತಿರುವುದು ಆಗಿದೆ.
ಕೇವಲ 19 ವರ್ಷದ ಸ್ಪೇನ್ ಹುಡುಗ ಅಲ್ಕರಾಝ್ ತಮ್ಮ ಎದುರಾಳಿ 24 ವರ್ಷದ ಟಿಯಾಫೊರನ್ನು ಅತ್ಯಂತ ರೋಚಕ ಕಾದಾಟದಲ್ಲಿ ಮಣಿಸಿದರು. ಮೊದಲ ಸೆಟ್ ಫಲಿತಾಂಶ ನಿರ್ಣಯವಾಗಿದ್ದು ಟೈಬ್ರೇಕರ್‌ನಲ್ಲಿ. ಇಲ್ಲಿ 7-6ರಿಂದ ಟಿಯಾಫೋ ಗೆದ್ದರು.
ಮುಂದಿನೆರಡು ಸೆಟ್‌ಗಳಲ್ಲಿ ತಿರುಗಿಬಿದ್ದ ಅಲ್ಕರಾಝ್ 6-3, 6-1ರಿಂದ ಗೆದ್ದರು. 4ನೇ ಸೆಟ್ ಮತ್ತೆ ಟೈಬ್ರೇಕರ್‌ಗೆ ಹೋಯಿತು. ಇಲ್ಲಿ ಟಿಯಾಫೋ 7-6ರಿಂದ ಜಯಿಸಿದರು. ಹಾಗಾಗಿ ಅಂತಿಮ ಸೆಟ್ ನಿರ್ಣಾಯಕವಾಯಿತು. ಇಲ್ಲಿ ಅಲ್ಕರಾಝ್ 6-3ರಿಂದ ಗೆದ್ದು ಫೈನಲ್‌ಗೇರಿದರು. ಆತಿಥೇಯ ದೇಶದ ಟಿಯಾಫೋ ನಿರಾಶೆಗೊಳ್ಳಬೇಕಾಯಿತು. ನಡಾಲ್ ಅನಂತರ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಅಲ್ಕರಾಝ್ರದ್ದಾಯಿತು.
ಇನ್ನೊಂದು ಸೆಮಿಫೈನಲ್ ಕೂಡ ಅಷ್ಟೇ ತೀವ್ರವಾಗಿತ್ತು. ಆದರೆ ಇದು ನಾಲ್ಕೇ ಸೆಟ್‌ಗಳಲ್ಲಿ ಇತ್ಯರ್ಥವಾಯಿತು. ರಷ್ಯಾದಲ್ಲಿ ಹುಟ್ಟಿ ದುಬಾೖಯಲ್ಲಿ ವಾಸಿಸುತ್ತಿರುವ ಕರೆನ್ ಕಚನೊವ್‌ಗೆ ಈಗ 26 ವರ್ಷ. ಅವರೆದುರು ಸೆಣೆಸಿದ್ದು ನಾರ್ವೆಯ 23 ವರ್ಷದ ಕ್ಯಾಸ್ಪರ್ ರೂಡ್. ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದರಿಂದ ಫಲಿತಾಂಶವನ್ನು ಟೈಬ್ರೇಕರ್‌ನಲ್ಲಿ ನಿರ್ಧರಿಸಬೇಕಾಯಿತು. ಇಲ್ಲಿ ರೂಡ್ 7-6ರಿಂದ ಗೆದ್ದರು. 2ನೇ ಸೆಟ್‌ನಲ್ಲಿ ರೂಡ್ ಸುಲಭವಾಗಿ 6-2ರಿಂದ ಗೆದ್ದರು. 3ನೇ ಸೆಟ್‌ನಲ್ಲಿ ಮತ್ತೆ ರೋಚಕ ಸೆಣೆಸಾಟ ಕಂಡುಬಂತು. ಇಲ್ಲಿ ಕಚನೊವ್ 7-5ರಿಂದ ಜಯ ಸಾಧಿಸಿದರು. ಆದರೆ 4ನೇ ಸೆಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ರೂಡ್ 6-2ರಿಂದ ಜಯಶಾಲಿಯಾದರು ಮಾತ್ರವಲ್ಲ ಫೈನಲ್‌ಗೂ ನೆಗೆದರು. ಇಬ್ಬರ ನಡುವೆ ರವಿವಾರ ತಡರಾತ್ರಿ ಅಂತಿಮ ಹೋರಾಟ ನಡೆಯಲಿದೆ.