Advertisement

ಬಿಡಾಡಿ ಹೋರಿಗೆ ರೈತರಿಂದ ಆರೈಕೆ

11:00 AM Jan 23, 2019 | |

ಮುದ್ದೇಬಿಹಾಳ: ಮಗಡಾ ಕೊರೆದು ಮುಖದಲ್ಲಿ ಭಾರಿ ಗಾಯವಾಗಿ ಹುಳ ಬಿದ್ದು ಸಂಕಟಪಡುತ್ತಿದ್ದ ಬಿಡಾಡಿ ಹೋರಿಯೊಂದನ್ನು ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

Advertisement

ಇಲ್ಲಿನ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ ಅವರು ಹೊಲವೊಂದರಲ್ಲಿ ನೋವಿನಿಂದ ಒದ್ದಾಡುತ್ತ ಮಲಗಿದ್ದ ಈ ಹೋರಿಯನ್ನು ನೋಡಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಶೃಂಗಾರಗೌಡ ಪಾಟೀಲ, ಮುತ್ತು ವಡವಡಗಿ ಮತ್ತು ತಮ್ಮ ಮಕ್ಕಳೊಂದಿಗೆ ಹೋರಿಗಾಗಿ ಹುಡುಕಾಟ ನಡೆಸಿದರೂ ಹೋರಿ ಸಿಕ್ಕಿರಲಿಲ್ಲ. ಕೊನೆಗೆ ಮಂಗಳವಾರ ಮಧ್ಯಾಹ್ನ ಹೋರಿ ಹಿಡಿದು ಬಿಇಒ ಕಚೇರಿ ಹತ್ತಿರ ಕಟ್ಟಿ ಹಾಕಲಾಗಿತ್ತು.

ರೈತರೂ ಆಗಿರುವ ಪುರಸಭೆ ಸದಸ್ಯ ಬಸಪ್ಪ ತಟ್ಟಿ, ಗುಂಡಪ್ಪ ತಟ್ಟಿ, ಈರಪ್ಪ ಸಣಗೇರಿ, ಲಾಲಸಾ ಗುರಿಕಾರ ಮತ್ತಿತರರು ಹೋರಿಯನ್ನು ನೆಲಕ್ಕೆ ಕೆಡವಿ ಅದರ ಮುಖಕ್ಕೆ ಹಾಕಿದ್ದ ಮಗಡಾ ತುಂಡರಿಸಿ ಗಾಯಕ್ಕೆ ಔಷಧೋಪಚಾರ ಮಾಡಿ ಅದರ ನೋವು ನಿವಾರಣೆಗೆ ಹರಸಾಹಸ ಪಟ್ಟರು. ಈ ವೇಳೆ ಹೋರಿಗೆ ಚಿಕಿತ್ಸೆ ನೀಡಿದ ರೈತರನ್ನು ಇಬ್ರಾಹಿಂ ಮುಲ್ಲಾ ಹೂಮಾಲೆ ಹಾಕಿ ಮಾನವೀಯತೆಯನ್ನು ಕೊಂಡಾಡಿದರು.

ಈ ವೇಳೆ ಮಾತನಾಡಿದ ಇಬ್ರಾಹಿಂ, ಹೋರಿ ಸಣ್ಣದಿದ್ದಾಗಲೇ ಮಗಡಾ ಹಾಕಲಾಗಿದೆ. ಹೋರಿ ಬೆಳೆದಂತೆ ಮಗಡಾ ಸಣ್ಣದಾಗಿ ಮುಖದ ಚರ್ಮ ಸೀಳಿಕೊಂಡು ದೊಡ್ಡ ಗಾಯ ಮಾಡಿದೆ. ಗಾಯಕ್ಕೆ ಸೂಕ್ತ ಚಿಕಿತೆ ಇಲ್ಲದ್ದರಿಂದ ಹುಳ ಬಿದ್ದು ಸಂಕಟಪಡುತ್ತಿತ್ತು. ಇನ್ನೂ ಕೆಲ ದಿನ ಹಾಗೆ ಬಿಟ್ಟಿದ್ದರೆ ಅದು ಅನಾಥವಾಗಿ ಸಾವನ್ನಪ್ಪುವ ಸಂಭವ ಇತ್ತು. ತಟ್ಟಿ ಮತ್ತು ಸಣಗೇರಿ ಅವರು ಪ್ರಯತ್ನಪಟ್ಟು ಹೋರಿಯ ಮಗಡಾ ಕತ್ತರಿಸಿ ಔಷಧ ಹಾಕಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಹೋರಿಯನ್ನು ಪುರಸಭೆ ಸದಸ್ಯ ಬಸಪ್ಪ ಅವರ ಮನೆಯಲ್ಲಿ ಕಟ್ಟಿ ಹಾಕಿ ಮೇಯಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ವಾರಸುದಾರರು ಬಂದಲ್ಲಿ ಮಾಲೀಕತ್ವ ಖಚಿತಪಡಿಸಿಕೊಂಡು ಹೋರಿ ಹಸ್ತಾಂತರಿಸಲಾಗುತ್ತದೆ. ಇಲ್ಲವಾದಲ್ಲಿ ತಟ್ಟಿ ಅವರೇ ಅದನ್ನು ಸಾಕಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next