Advertisement

ಧರೆಗುರುಳಿದ ಪಕ್ಷಿಮರಿಗಳಿಗೆ ಪಳ್ಳದಲ್ಲಿ ಆರೈಕೆ

12:10 AM Nov 09, 2019 | Sriram |

ಉಡುಪಿ: ಮಣಿಪಾಲದ ಟೈಗರ್‌ ಸರ್ಕಲ್‌ನಿಂದ ಎಂಐಟಿವರೆಗೆ ನಡೆಯುತ್ತಿರುವ ರಾ.ಹೆ.169ಎ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿ ಪಕ್ಷಿಗಳಿಗೆ ಕಂಟಕವಾಗಿದೆ. ರಸ್ತೆ ವಿಸ್ತರಣೆಗಾಗಿ ಹಕ್ಕಿಗಳ ಗೂಡುಗಳಿದ್ದ ಮರಗಳನ್ನು ಕಡಿಯಲಾಗಿದ್ದು ಅದೆಷ್ಟೋ ಮೊಟ್ಟೆ, ಮರಿಗಳು ಮಣ್ಣು ಪಾಲಾಗಿವೆ.

Advertisement

ಮಾಹಿತಿ ತಿಳಿದು ಧಾವಿಸಿದ ಅರಣ್ಯ ಇಲಾಖೆ ಹಾಗೂ ಮಣಿಪಾಲದ ಪಕ್ಷಿ ಪ್ರೇಮಿಗಳ ಸಹಕಾರದಲ್ಲಿ ಒಂದಷ್ಟು ಹಕ್ಕಿ ಮರಿಗಳನ್ನು ರಕ್ಷಿಸಿ ಮಣ್ಣಪಳ್ಳದಲ್ಲಿ ಆರೈಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಮಣಿಪಾಲದ ಕ್ಯಾನ್ಸರ್‌ ಆಸ್ಪತ್ರೆಯ ಮುಂಭಾಗದ ವಿಶಾಲ ಗೋಳಿಮರದ ರೆಂಬೆಕೊಂಬೆಗಳನ್ನು ಕಡಿದು ಉರುಳಿಸಲಾಗಿದ್ದು, ಈ ಮರದಲ್ಲಿ ಗೂಡುಕಟ್ಟಿ ಸಂಸಾರ ನಡೆಸಿದ್ದ ಅದೆಷ್ಟೋ ನೀರು ಕಾಗೆಗಳ ಮೊಟ್ಟೆಗಳು ನಾಶವಾದರೆ, ಆಗಷ್ಟೇ ಹಾರಲು ತವಕಿಸುತ್ತಿದ್ದ ಪಕ್ಷಿ ಮರಿಗಳ ಬದುಕು ಮಣ್ಣುಪಾಲಾಗಿದೆ.

ಈ ಮರದಲ್ಲಿ ಹಕ್ಕಿಗಳ ಗೂಡುಗಳಿರುವುದು ತಿಳಿದಿದ್ದರೂ, ದಯೆತೋರದ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಗುತ್ತಿಗೆದಾರರಿಗೆ ಪರಿಸರ ಪ್ರೇಮಿಗಳು, ಪಕ್ಷಿ ಪ್ರೇಮಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಮರಗಳನ್ನು ಕಡಿಯಲು ಅನುಮತಿ ನೀಡುವಾಗ ಹಕ್ಕಿಗಳ ಸಂತಾನೋತ್ಪತ್ತಿ ಆದ ಅನಂತರವೇ ಕಡಿಯುವಂತೆ ಷರತ್ತು ಹಾಕಲಾಗಿತ್ತು. ಆದರೆ ಗುತ್ತಿಗೆದಾರರು ಇಲಾಖೆಯ ಗಮನಕ್ಕೆ ತಾರದೆ ಕಡಿದಿದ್ದಾರೆ.

ಇನ್ನೂ 6 ಮರಗಳಲ್ಲಿ ಹಕ್ಕಿಗಳು
ಮಣಿಪಾಲ ಬಸ್‌ ನಿಲ್ದಾಣದಿಂದ ಎಂಐಟಿವರೆಗೆ ರಸ್ತೆ ಪಕ್ಕದಲ್ಲಿರುವ 7 ಮರಗಳಲ್ಲಿ ಹಕ್ಕಿಗಳು ಸಂತಾನೋತ್ಪತ್ತಿ ಮಾಡಿಕೊಂಡಿವೆ. ಕನಿಷ್ಠ 200ಕ್ಕೂ ಅಧಿಕ ನೀರು ಕಾಗೆಗಳು, ಕೊಳಬಕ, ಬೆಳ್ಳಕ್ಕಿಗಳು ಇಲ್ಲಿ ಆಶ್ರಯ ಪಡೆದಿವೆ. ಹಲವಾರು ವರ್ಷಗಳಿಂದ ರಸ್ತೆ ಪಕ್ಕದ ಈ ಮರಗಳಲ್ಲಿ ನಗರದ ಅಷ್ಟೊಂದು ಮಾಲಿನ್ಯ, ಜಂಜಾಟದ ನಡುವೆಯೂ ಈ ಹಕ್ಕಿಗಳು ಸದ್ದಿಲ್ಲದೆ ತಮ್ಮ ಪಾಡಿಗೆ ಸಂಸಾರ ಮಾಡಿಕೊಂಡಿರುವುದು ವಿಶೇಷ.

Advertisement

ಕೆಎಂಸಿಯ ತುರ್ತು ಚಿಕಿತ್ಸಾ ವಿಭಾಗದ ಮುಂಭಾಗದಲ್ಲಿರುವ ಬೃಹತ್‌ ದೇವದಾರು ಮರದಲ್ಲಿ ನೂರಾರು ಬಾವಲಿಗಳು ವಾಸವಾಗಿದ್ದು, ಮರದ ದೊಡ್ಡ ಕೊಂಬೆಯೊಂದನ್ನು ಈಗಾಗಲೇ ಕಡಿದುರುಳಿಸಲಾಗಿದೆ. ಹೀಗಾಗಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪಕ್ಷಿಗಳ ಆತಂಕ ತಪ್ಪಿದ್ದಲ್ಲ ಎಂದು ವಿಷಾಧ ವ್ಯಕ್ತಪಡಿಸುತ್ತಾರೆ ವೃಕ್ಷಪ್ರೇಮಿಗಳು.

ಮಣ್ಣಪಳ್ಳದಲ್ಲಿ ಆರೈಕೆ
ಧರೆಗುಳಿದ ಸುಮಾರು 50ರಷ್ಟು ನೀರು ಕಾಗೆಗಳ ಮರಿಗಳನ್ನು ಅರಣ್ಯ ಇಲಾಖೆ ವಾಹನದಲ್ಲಿ ಮಣಿಪಾಲ ಬರ್ಡ್ಸ್‌ ಗ್ರೂಪ್‌ನ ಸಹಕಾರದಲ್ಲಿ ಮಣಿಪಾಲ ಪಳ್ಳಕ್ಕೆ ಕೊಂಡೊಯ್ದು ಆರೈಕೆ ಮಾಡಲಾಗುತ್ತಿದೆ.

ಮಣಿಪಾಲ ಬಸ್‌ ನಿಲ್ದಣದಲ್ಲಿ ಇನ್ನೆರಡು ಮರಗಳಲ್ಲಿ ನೀರು ಕಾಗೆ ಹಾಗೂ ಕೊಳ ಬಕಗಳ ಹಲವಾರು ಗೂಡುಗಳಿವೆ. ನೂರಕ್ಕೂ ಅಧಿಕ ಪಕ್ಷಿಗಳು ತಮ್ಮ ಮರಿಗಳ, ಮೊಟ್ಟೆಗಳ ಪೋಷಣೆಯಲ್ಲಿ ತೊಡಗಿಕೊಂಡಿವೆ. ಆದರೆ ಇದಕ್ಕೂ ಕುತ್ತುಬರುವ ಸಾಧ್ಯತೆಗಳು ಹೆಚ್ಚಾಗಿವೆ.

ನೋವು ತರಿಸಿದೆ
ಹಾರಲಾಗದೆ ಧರೆಗುರುಳಿದ ಪಕ್ಷಿಗಳನ್ನು ಮಣ್ಣಪಳ್ಳದಲ್ಲಿ ಆರೈಕೆ ಮಾಡಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳು ಹಾಗೂ ಪಕ್ಷಿಮರಿಗಳು ನಾಶವಾಗುವಂತೆ ಮಾಡಿರುವುದು ನೋವು ತರಿಸಿದೆ.
-ತೇಜಸ್ವಿ ಆಚಾರ್ಯ
ಬರ್ಡರ್ಸ್‌ ಗ್ರೂಪ್‌, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next