Advertisement
ಇದು ಕೆರಾಡಿ ಗ್ರಾಮದ ಕಾರಿಬೈಲು ಕಿ.ಪ್ರಾ. ಶಾಲೆಯ ದುಸ್ಥಿತಿ. ಎಲ್ಲ ಗ್ರಾಮೀಣ ಭಾಗದ ಶಾಲೆಗಳ ಸಮಸ್ಯೆಯೆಂದರೆ ಮಕ್ಕಳ ಸಂಖ್ಯೆ ಕಡಿಮೆಯಿರುವುದು. ಇಲ್ಲಿ ತರಗತಿಗೆ ಇಂತಿಷ್ಟಾದರೂ ಮಕ್ಕಳಿದ್ದಾರೆ. ಆದರೆ ಇಲ್ಲಿಗೆ ಬರಲು ರಸ್ತೆಯೇ ಇಲ್ಲ. ಈಗಿರುವುದು ಮಣ್ಣಿನ ರಸ್ತೆ. ಆದರೆ ಮಳೆ ನೀರು ಹರಿದು ಹೋಗುತ್ತಿರುವುದರಿಂದ ಈ ರಸ್ತೆಯಲ್ಲಿ ವಾಹನ ಬಿಡಿ, ನಡೆದುಕೊಂಡು ಹೋಗುವುದು ಕಷ್ಟ.
ಇದು ಕಿ.ಪ್ರಾ. ಶಾಲೆಯಾಗಿದ್ದು, 22 ವರ್ಷಗಳ ಹಿಂದೆ ಆರಂಭಗೊಂಡಿದೆ. ಈ ವರ್ಷ 1ನೇ ತರಗತಿಗೆ 8 ಮಂದಿ ದಾಖಲಾತಿ ಮಾಡಿಕೊಂಡಿದ್ದಾರೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ ಹೆಚ್ಚಿನ ದಾಖಲಾತಿಗಳು ಆಗುತ್ತಿತ್ತು. ಆದರೆ ಇಲ್ಲಿಗ ರಸ್ತೆ ದುಸ್ಥಿತಿ ಕಂಡು, ಪೋಷಕರೇ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗ 1 ರಿಂದ 5 ನೇ ತರಗತಿಯವರೆಗೆ ಒಟ್ಟು 31 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ 33 ಮಕ್ಕಳಿದ್ದರು. ಈ ಶಾಲೆ ಕೆರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಈಗಿರುವ ಮಣ್ಣಿನ ರಸ್ತೆಯಿರುವ ಹೆಚ್ಚಿನ ಭಾಗ ಹಳ್ಳಿಹೊಳೆ ಗ್ರಾ.ಪಂ.ಗೆ ಸೇರಿದೆ. ಇದೇ ಈ ರಸ್ತೆ ಅಭಿವೃದ್ಧಿ ಕಾಣದಿರಲು ಕಾರಣವಾಗಿದೆ. ಕೆರಾಡಿಯಿಂದ ಕಾರಿಬೈಲು, ಕುಂದಲಬೈಲುವರೆಗಿನ ಸುಮಾರು 10 ಕಿ.ಮೀ. ರಸ್ತೆಗೆ ಡಾಮರೀಕರಣವಾದರೆ ಈ ಭಾಗದ ಶಾಲೆ ಮಾತ್ರವಲ್ಲದೆ ಜನರಿಗೂ ಸಾಕಷ್ಟು ಅನುಕೂಲವಾಗಲಿದೆ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.
Related Articles
ಸದ್ಯಕ್ಕೆ ಈ ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರಿದ್ದಾರೆ. ಒಬ್ಬರು ಬ್ರಹ್ಮಾವರ, ಮತ್ತೂಬ್ಬರು ಕೋಟೇಶ್ವರದಿಂದ ನಿತ್ಯ ಇಲ್ಲಿಗೆ ಹೋಗಿ ಬರುತ್ತಾರೆ. ಮತ್ತೂಬ್ಬರು ಗೌರವ ಶಿಕ್ಷಕರಿದ್ದು, ಅವರಿಗೆ ಪೋಷಕರೇ ಗೌರವ ಧನ ಸಂಗ್ರಹಿಸಿ ನೀಡುತ್ತಿದ್ದಾರೆ. ಇಷ್ಟೊಂದು ಮಕ್ಕಳಿದ್ದರೂ, ಕನಿಷ್ಠ ಇನ್ನೊಬ್ಬರು ಶಿಕ್ಷಕರನ್ನು ಕೊಟ್ಟರೆ ಪ್ರಯೋಜನವಾಗುತ್ತದೆ ಎನ್ನುವುದು ಹೆತ್ತವರ ಬೇಡಿಕೆಯಾಗಿದೆ.
Advertisement
ಎಲ್ಲರಿಗೂ ಮನವಿ ಕೊಟ್ಟಾಯಿತು..ಕೆರಾಡಿಯಿಂದ ಕುಂದಲಬೈಲುವರೆಗಿನ ಸುಮಾರು 10 ಕಿ.ಮೀ. ರಸ್ತೆ ಡಾಮರೀಕರಣ ಮಾಡಿ ಅಂತ ಸಂಸದರು, ಶಾಸಕರು, ಜಿ.ಪಂ., ತಾ.ಪಂ., ಗ್ರಾ.ಪಂ. ಸಹಿತ ಎಲ್ಲರಿಗೂ ಅನೇಕ ಬಾರಿ ಮನವಿ ಕೊಟ್ಟಾಗಿದೆ. ಆದರೆ ಇಲ್ಲಿಯವರೆಗೆ ಯಾರೂ ಇತ್ತ ಗಮನವೇ ಹರಿಸಿಲ್ಲ. ಈ ಶಾಲೆಗೆ ಬರುವ ಮಕ್ಕಳು ಮಳೆಗೆ ಮಣ್ಣಿನ ರಸ್ತೆಯಲ್ಲಿ ಕಷ್ಟಪಟ್ಟು ನಡೆದುಕೊಂಡು ಬರುತ್ತಿದ್ದಾರೆ. ಇದಲ್ಲದೆ ಇಲ್ಲಿನ ಸುಮಾರು 40 ಮನೆಗಳ ಜನರಿಗೆ ಪಡಿತರ ತರಲು ಕೆರಾಡಿ ಪೇಟೆಗೆ ಹೋಗಬೇಕು. ಪಡಿತರಕ್ಕಿಂತ ಹೆಚ್ಚಿನ ಹಣವನ್ನು ಬಾಡಿಗೆಗೆ ನೀಡಬೇಕು.
-ಅರುಣ್ ಭಟ್, ಸ್ಥಳೀಯರು ರಸ್ತೆಗೆ ಅನುದಾನ ಇಡಲಾಗುವುದು
ಬೈಂದೂರು ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ 250 ಕೋ.ರೂ. ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದು, ಆ ಪೈಕಿ ಈ ಕೆರಾಡಿಯಿಂದ ಕುಂದಲಬೈಲುವರೆಗಿನ ರಸ್ತೆಯ ಅಭಿವೃದ್ಧಿಗೂ ಅನುದಾನ ಮೀಸಲಿರಿಸಿ, ಆದಷ್ಟು ಶೀಘ್ರ ಡಾಮರೀಕರಣ ಮಾಡಲಾಗುವುದು. ಈ ಶಾಲೆಗೂ ಅನುಕೂಲವಾಗುವುದರಿಂದ ಆದ್ಯತೆ ನೆಲೆಯಲ್ಲಿ ಈ ಬಗ್ಗೆ ಗಮನಹರಿಸಲಾಗುವುದು. ಇನ್ನೂ ಶಿಕ್ಷಕರ ಬೇಡಿಕೆ ಬಗ್ಗೆ ಶಿಕ್ಷಣಾಧಿಕಾರಿಗಳ ಜತೆಗೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು – ಪ್ರಶಾಂತ್ ಪಾದೆ