Advertisement

ಮೀನುಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಅಪಾರ

01:41 PM Sep 12, 2018 | |

. ಮೀನುಗಾರಿಕೆ ಮತ್ತು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇಗಿವೆ?
ನಮ್ಮ ದೇಶ ವಾರ್ಷಿಕ 278 ಮಿಲಿಯನ್‌ ಟನ್‌ ಆಹಾರ ಉತ್ಪಾದನೆ ಮಾಡುತ್ತಿದೆ. ಹಾಗಿದ್ದರೂ 20 ಕೋಟಿ ಜನ ಹಸಿವಿನಿಂದ ತತ್ತರಿಸುತ್ತಿದ್ದಾರೆ. ಸುಮಾರು 40 ಕೋಟಿ ಜನ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಸಾವಿನ ಸಂಖ್ಯೆಯೂ ಜಾಸ್ತಿಯಿದೆ. ಆ ಕಾರಣದಿಂದ ಹೆಚ್ಚುತ್ತಿರುವ ಹಸಿವನ್ನು ನೀಗಿಸುವಲ್ಲಿ ಮೀನುಗಾರಿಕೆ ಮತ್ತು ಮೀನು ಕೃಷಿಯ ಪಾತ್ರ ಮುಂದೆ ಗಣನೀಯವಾಗಿದೆ. ಹಾಗಾಗಿ ಹೊಸ ಉದ್ಯೋಗಾವಕಾಶಗಳನ್ನು ಈ ಕ್ಷೇತ್ರ ಭವಿಷ್ಯದಲ್ಲಿ ನೀಡಲಿದೆ.

Advertisement

. ಕೃಷಿ ಬಗ್ಗೆ ಯುವಕರ ಒಲವು ಕಡಿಮೆಯಾಗುತ್ತಿದೆ ಎಂಬ ಆರೋಪವಿದೆ. ಕಲಿಕೆ ಮೂಲಕ ಒಲವು ಬೆಳೆಸಲು ಸಾಧ್ಯವೇ?
ಆರೋಪ ಅಲ್ಲ; ಸತ್ಯ. ಆದರೆ ಒಮ್ಮೆ ಕೃಷಿ ರಂಗಕ್ಕೆ ಧುಮುಕಿದರೆ ಖಂಡಿತ ವಿಮುಖರಾಗಲಾರರು. ಕೃಷಿ ಅಥವಾ ಮೀನು ಕೃಷಿಯಲ್ಲಿ ಮಾನವ ಶ್ರಮ ಕಡಿಮೆ. ಆದರೆ ಲಾಭ ಜಾಸ್ತಿ. ಈ ನಿಟ್ಟಿನಲ್ಲಿ ಕೃಷಿಯಿಂದ ವಿಮುಖರಾದವರು ಮೀನು ಕೃಷಿಯನ್ನು ಉದ್ಯಮವಾಗಿ ಸ್ವೀಕರಿಸಬಹುದು. ಉದ್ಯೋಗವಾಗಿ ಸ್ವೀಕರಿಸಿ, ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದರೆ ಕೃಷಿ ಮತ್ತು ಮೀನು ಕೃಷಿ ಎರಡೂ ಲಾಭದಾಯಕ ಉದ್ಯಮ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮೀನುಗಾರಿಕಾ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುವಂತಹ ತಂತ್ರಜ್ಞಾನಗಳು ಲಭ್ಯವಿವೆ.

. ಮೀನುಗಾರಿಕೆ ಮತ್ತು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಬದಲಾಗಬೇಕಾದ ವಿಷಯಗಳಿವೆಯೇ?
ಆಹಾರ ಉತ್ಪಾದನೆ ಬಗ್ಗೆ ಮಾತ್ರ ನಾವೆಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದೇವೆ. ಆದರೆ ಸಮಸ್ಯೆ ಇರುವುದು ಉತ್ಪಾದನೆಯಲ್ಲಿ ಅಲ್ಲ; ಸರಬರಾಜು ಮಾಡುವ ವ್ಯವಸ್ಥೆಯಲ್ಲಿ. ವ್ಯವಸ್ಥಿತ ಸರಬರಾಜು ಆದಲ್ಲಿ ನಮಗೆ ಈಗ ಉತ್ಪಾದನೆ ಆಗುತ್ತಿರುವ ಆಹಾರವೇ ಸಾಕು. ಯಾವಾಗ ಪೂರೈಕೆ ಮತ್ತು ಬೇಡಿಕೆಯನ್ನು ನಿಗ್ರಹಿಸುತ್ತೇವೋ, ವೈಜ್ಞಾನಿಕ ಬೆಲೆಯನ್ನು ರೈತರಿಗೆ ಕೊಡಲು ಪ್ರಾರಂಭಿಸುತ್ತೇವೋ ಮತ್ತು ಉತ್ಪಾದನೆಯಾದ ಎಲ್ಲ ಆಹಾರಗಳನ್ನು ಸರಿಯಾಗಿ ಸಂಸ್ಕರಣ ವ್ಯವಸ್ಥೆ ಮಾಡಿಕೊಳ್ಳುತ್ತೇವೆಯೋ ಆಗ ಆಹಾರಕ್ಕೆ ಸಮಸ್ಯೆ ಬಾರದು. 

. ಮೀನುಗಾರಿಕಾ ಕ್ಷೇತ್ರದ ಮಹತ್ವ, ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಗೆ ಮನವರಿಕೆ ಮಾಡಬಹುದು?
ಬಂಡವಾಳದ ಕೊರತೆ ಮತ್ತು ಅಗತ್ಯ ಕೌಶಲದ ಕೊರತೆ, ಉತ್ಸಾಹದ ಕೊರತೆ ಯುವಕರಲ್ಲಿ ಕಾಡುತ್ತಿದೆ. ಹಾಗಾಗಿ ಈ ಬಗ್ಗೆ ವಿದ್ಯಾರ್ಥಿಗಳು ಅಷ್ಟೊಂದು ಆಸಕ್ತಿ ತಳೆಯುತ್ತಿಲ್ಲ. ಕೃಷಿಯನ್ನು ಬ್ರ್ಯಾಂಡ್  ಮಾಡಿ ಲಾಭದಾಯಕ ಎಂಬುದಾಗಿ ಪ್ರೊಮೋಟ್‌ ಮಾಡಿದರೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯ. 

ಧನ್ಯಾ ಬಾಳೆಕಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next