ಬೆಂಗಳೂರು: ರಾಜ್ಯದಲ್ಲಿ ಕುಶಲಕರ್ಮಿಗಳ ಕೊರತೆಯಿಂದಾಗಿ ಹೊರ ರಾಜ್ಯದವರು ಅವಕಾಶ ಪಡೆಯುತ್ತಿದ್ದು, ಕೌಶಲ್ಯ ಗಳಿಸಿದರೆ ಆ ಉದ್ಯೋಗಗಳು ರಾಜ್ಯದ ಅಭ್ಯರ್ಥಿಗಳಿಗೇ ಸಿಗಲಿವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕೌಶಲ್ಯಾಭಿವೃದ್ಧಿ ನಿಗಮವು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಕೌಶಲ್ಯ ಭಾಗ್ಯ’ದಡಿ ಪೂರ್ವ ಕಲಿಕೆ ಗುರುತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೌಶಲ್ಯ ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಉನ್ನತ ಶಿಕ್ಷಣ ಸಚಿವಾಲಯವನ್ನು ಮಾನವ ಸಂಪನ್ಮೂಲ ಇಲಾಖೆಯಾಗಿ ಬದಲಾಯಿಸಿ ಯುವಜನರಿಗೆ ಕೌಶಲ್ಯ ಕಲಿಕೆಗೆ ವೇದಿಕೆ ಸಜ್ಜುಗೊಳಿಸಿದ್ದರು. ಅದು ಈಗ ಹೆಮ್ಮರವಾಗಿ ಬೆಳೆದಿದ್ದು, ನಾನಾ ಕ್ಷೇತ್ರಗಳಿಗೆ ಪೂರಕವಾಗಿ ಕೌಶಲ್ಯ ಕಲ್ಪಿಸಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ವ್ಯಕ್ತಿಯೊಬ್ಬರು ತಾವು ಮಾಡುವ ಕೆಲಸ, ಕಾರ್ಯದಲ್ಲಿ ಶ್ರದ್ಧೆ, ಕುಶಲತೆಯನ್ನು ರೂಢಿಸಿಕೊಳ್ಳಬೇಕು ಎಂಬುದು ಅವರ ಮಾತಿನ ಅರ್ಥ. ಕುಶಲಕರ್ಮಿಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆಯಲು ನೆರವಾಗುವವಂತೆ ಸೂಕ್ತ ಕೌಶಲ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, “ಕೌಶಲ್ಯ ಭಾಗ್ಯ’ ಕಾರ್ಯಕ್ರಮದಡಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿರುವ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಲ್ಲಿ ತಲಾ ಮೂರು ಶಿಬಿರ ನಡೆಸಲಾಗುತ್ತದೆ. 17 ವಿಶ್ವವಿದ್ಯಾಲಯಗಳಲ್ಲಿ ಆರು ಶಿಬಿರ ಸೇರಿದಂತೆ ಒಟ್ಟು 531 ಶಿಬಿರ ಆಯೋಜಿಸುವ ಗುರಿ ಇದೆ ಎಂದು ಹೇಳಿದರು.
ಪ್ರತಿ ವರ್ಷ ಐದು ಲಕ್ಷ ಉದ್ಯೋಗಾಕಾಂಕ್ಷಿಗಳು ನಾನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿ ಕಲ್ಪಿಸುವುದು ಸರ್ಕಾರದ ಸಂಕಲ್ಪ. ಅದರಂತೆ ಈವರೆಗೆ 3.17 ಲಕ್ಷ ಮಂದಿಗೆ ತರಬೇತಿ ನೀಡಲಾಗಿದ್ದು, ಪ್ರಸಕ್ತ ವರ್ಷ 2.50 ಲಕ್ಷ ಯುವಜನತೆಗೆ ಕೌಶಲ ತರಬೇತಿ ನೀಡುವ ಗುರಿ ಇದೆ ಎಂದು ಹೇಳಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಆರ್.ಸಂಪತ್‌ರಾಜ್, ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಕೌಶಲ್ಯ ಮಿಷನ್ ಹಾಗೂ ಕೈಗಾರಿಕೆ, ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಆಯುಕ್ತ ಸಮೀರ್ ಶುಕ್ಲಾ, ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ ಇತರರು ಉಪಸ್ಥಿತರಿದ್ದರು.