ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ವೃತ್ತಿ ಮತ್ತು ನಿವೃತ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮಗೆ ಇನ್ನೊಬ್ಬರು ನಿವೃತ್ತಿ ತಂದುಕೊಡುವ ಮೊದಲೇ ನಾವೇ ನಿವೃತ್ತಿ ಹೊಂದಿದರೆ ಅದು ನೆಮ್ಮದಿಯ ಜೀವನ ತಂದುಕೊಡುತ್ತದೆ ಎಂದು ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಹು-ಧಾ ಪೊಲೀಸ್ ಕಮೀಷನರೇಟ್ ಘಟಕದ ಸ್ನೇಹಕೂಟ ಹಾಗೂ ಬೀಟ್ ಸಿಬ್ಬಂದಿಯು ಸೋಮವಾರ ಹಮ್ಮಿಕೊಂಡಿದ್ದ ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಪಿ.ಎಚ್. ರಾಣೆ ಅವರು ಹು-ಧಾ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಎಲ್ಲರೊಂದಿಗೆ ಆತ್ಮೀಯತೆ ಹಾಗೂ ಸರಳ ಸಜ್ಜನಿಕೆ ಹೊಂದಿದ್ದರು. ಎಲ್ಲ ಧರ್ಮಗುರುಗಳ ಮೇಲೆ ವಿಶ್ವಾಸ, ಶ್ರದ್ಧೆ ಹೊಂದಿದ್ದರು. ಆ ಮೂಲಕ ತಮ್ಮ ಅಧಿಕಾರಾವಧಿ ಗೆದ್ದರು ಎಂದರು.
ಪೊಲೀಸ್ ಇಲಾಖೆ ಇನ್ನುಮುಂದೆ ಶಾಂತಿ ಸಭೆ ಎಂದು ಕರೆಯುವ ಬದಲು ಸ್ನೇಹಕೂಟ ಸಭೆಯನ್ನಾಗಿ ಏರ್ಪಡಿಸಬೇಕೆಂದು ಆಯುಕ್ತರಿಗೆ ಉಪದೇಶಿಸಿದ್ದೆ ಎಂದು ಹೇಳಿದರು. ಪಾಂಡುರಂಗ ರಾಣೆ ಮಾತನಾಡಿ, ನಾವು ನಿಮ್ಮವರು ನೀವು ನಮ್ಮವರು ಎಂಬ ಸಂಬಂಧ ಮುಂದುವರಿಸಿಕೊಂಡು ಹೋಗಬೇಕು.
ಮೂರುಸಾವಿರ ಮಠದ ಶ್ರೀಗಳ ಉಪದೇಶದಂತೆ ಶಾಂತಿ ಸಭೆ ಬದಲು ಸ್ನೇಹಕೂಟ ಸಭೆ ಕರೆಯಲಾಗುತ್ತಿದೆ. ಸೇವೆಯಲ್ಲಿದ್ದವರಿಗೆ ನಿವೃತ್ತಿ ಅನಿವಾರ್ಯ. ಆದರೆ ಅವಳಿ ನಗರದ ಜನರ ಪ್ರೀತಿ, ಗೌರವವು ಮಾನ್ಯತೆ ನೀಡಿದಂತಾಗಿದೆ. ಈಗ ನಾನು ಸಂತೃಪ್ತಿಯಿಂದ ಸೇವಾ ನಿವೃತ್ತಿಯಾಗುತ್ತಿದ್ದೇನೆ ಎಂದರು.
ತಾಜುದ್ದೀನ ಖಾದ್ರಿ, ರೆ. ಉಳ್ಳಾಗಡ್ಡಿ, ಗ್ಯಾನಿಸಿಂಗ್, ಮಹಾಪೌರ ಡಿ.ಕೆ. ಚವ್ಹಾಣ, ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಡಿಸಿಪಿಗಳಾದ ರೇಣುಕಾ ಸುಕುಮಾರ, ಬಿ.ಎಸ್. ನೇಮಗೌಡ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳವರು, ಪೊಲೀಸ್ ಸಿಬ್ಬಂದಿ ರಾಣೆ ಅವರನ್ನು ಸತ್ಕರಿಸಿದರು. ಇನ್ಸ್‌ಪೆಕ್ಟರ್ ಜಗದೀಶ ಹಂಚಿನಾಳ ಪ್ರಾರ್ಥಿಸಿದರು. ಎಸಿಪಿ ದಾವೂದಖಾನ್ ಸ್ವಾಗತಿಸಿದರು. ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು.