Advertisement

ಮಕ್ಕಳ ಆರೋಗ್ಯ ದತ್ತ ಇರಲಿ ಚಿತ್ತ

11:57 AM Dec 13, 2019 | Suhan S |

ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ ಹೊಣೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

Advertisement

ಇಲ್ಲಿನ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧಾರವಾಡದ ಮಕ್ಕಳ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್‌ ಧಾರವಾಡ ಸೆಂಟ್ರಲ್‌ ಹಾಗೂ ಎಸ್‌ಡಿಎಂ ದಂತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಸಾಧನೆಯ ಮೆಟ್ಟಿಲು ಹತ್ತಲು ಪಠ್ಯ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನ ಸಂಪಾದನೆ ಕೂಡಾ ಅಷ್ಟೇ ಮಹತ್ವ ಪಡೆದಿದೆ. ದೇಶದ ಪಾರಂಪರಿಕ ಇತಿಹಾಸದ ಅರಿವು ಮಕ್ಕಳಿಗೆ ತಿಳಿಸಬೇಕು. ಪುರಾಣ, ಪುಣ್ಯ ಕಥೆ, ರಾಮಾಯಣ, ಮಹಾಭಾರತ ಜೊತೆಗೆ ಬೇರೆ ದೇಶದ ಕಥೆಗಳನ್ನು ಮಕ್ಕಳು ಓದಲು ಅನುಕೂಲ ಮಾಡಿಕೊಡಬೇಕು. ಕಥೆ ಪುಸ್ತಕ ಓದುವ ಹವ್ಯಾಸ ಮಕ್ಕಳ ಬುದ್ಧಿವಂತಿಕೆ ಹಾಗೂ ಮನೋಬಲ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿ ಕಾರಿ ವಿದ್ಯಾ ನಾಡಿಗೇರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪ್ರಾರ್ಥನೆ ಮಾಡುವಾಗ ಪುಸ್ತಕ ಪರಿಚಯ ಎಂಬ ವಿನೂತನ ಕಾರ್ಯಕ್ರಮ ಜಾರಿ ಮಾಡಲಾಗಿದೆ. ದಿನಕ್ಕೊಂದು ಪುಸ್ತಕ ಪರಿಚಯ ಮಾಡುವ ಘನ ಉದ್ದೇಶ ಹೊತ್ತು ಅನುಷ್ಠಾನಗೊಂಡ ಇಂತಹ ಪ್ರಯೋಗ ನಡೆಸಲು ಖಾಸಗಿ ಶಾಲೆಗಳು ಮುಂದೆ ಬರಬೇಕು ಎಂದರು. ಚಿಕ್ಕ ಮಕ್ಕಳ ತಜ್ಞ ಡಾ| ರಾಜನ್‌ ದೇಶಪಾಂಡೆ ಮಾತನಾಡಿ, ತಂಬಾಕು ಸೇವನೆಯಿಂದ ದೂರ ಇರಬೇಕು. ಝಂಕ್‌ ಫುಡ್‌ ತಿನ್ನಬಾರದು. ಪೌಷ್ಟಿಕಾಂಶಯುಳ್ಳ ಆಹಾರ ಸೇವನೆ ಮಾಡಬೇಕು. ಒಳ್ಳೆಯ ಆಹಾರ ಪದ್ಧತಿಯಿಂದ ಸಕಾರಾತ್ಮಕ ಚಿಂತನೆಗಳು ಮೂಡಿ ಉಲ್ಲಾಸದ ಜೀವನ ನಿಮ್ಮದಾಗುತ್ತದೆ ಎಂದರು.

ಈ ಶಿಬಿರದಲ್ಲಿ ಭಾಗವಹಿಸಿದ ಧಾರವಾಡ ಎಸ್‌ಡಿಎಂ ದಂತ ಮಹಾವಿದ್ಯಾಲಯದ ಡಾ| ವಿಜಯ ತ್ರಾಸದ್‌ ನೇತೃತ್ವದ 22 ಜನರ ವೈದ್ಯರ ತಂಡ 2500ಕ್ಕೂ ಹೆಚ್ಚು ಮಕ್ಕಳ ದಂತ ತಪಾಸಣೆ ಮಾಡಿದರು. ವಿದ್ಯಾರ್ಥಿನಿಯರು ಋತು ಚಕ್ರ ಕಾಲದಲ್ಲಿ ಕೈಗೊಳ್ಳಬಹುದಾದ ಸ್ವತ್ಛತೆ ನಿರ್ವಹಣೆ ಬಗ್ಗೆ ಸ್ತ್ರೀ ರೋಗ ತಜ್ಞೆ ಡಾ| ಕೋಮಲ್‌ ಕುಲಕರ್ಣಿ ಹಾಗೂ ಡಾ| ನಂದಾ ಹಂಪಿಹೋಳಿ ಮಾಹಿತಿ ನೀಡಿದರು. ಪೌಷ್ಟಿಕ ಆಹಾರ ಸೇವನೆ ಬಗ್ಗೆ ಡಾ| ಪೂರ್ತಿ ಶರ್ಮಾ ತಿಳಿಸಿದರು.

Advertisement

ಅಳ್ನಾವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಸಿ. ಹಿರೇಮಠ, ಧಾರವಾಡ ರೋಟರಿ ಕ್ಲಬ್‌ ಅಧ್ಯಕ್ಷ ಡಾ| ಕವನ ದೇಶಪಾಂಡೆ, ಮುಖ್ಯಶಿಕ್ಷಕಿ ಶೋಭಾ ನಾಯಕ, ಡಾ| ಪ್ರಗತಿ ಭಟ್‌, ಸುನೀಲ ಬಾಗೇವಾಡಿ, ಸಿಆರ್‌ಪಿ ದಪೇದಾರ ಇದ್ದರು. ಮುಕುಂದ ಕುಲಕರ್ಣಿ ನಿರ್ವಹಿಸಿದರು. ಸುಧಾ ಜೋಶಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next