ಮಂಗಳೂರು: ಡೆಂಗೆ ಮಹಾಮಾರಿ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಕಂಬಂಧಬಾಹು ಚಾಚಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜು.28ರಂದು ನಗರದ 3ಮಾಲ್‌ಗಳಲ್ಲಿ ಸಹಿ ಅಭಿಯಾನ, ಫ್ಲ್ಯಾಶ್ ಮಾಬ್ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರಪಾಲಿಕೆ ಹಾಗೂ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಜೆ 4ರಿಂದ 6.30ರವರೆಗೆ ನಗರದ ಸಿಟಿಸೆಂಟರ್ ಮಾಲ್, ಭಾರತ್ ಮಾಲ್, ಫೋರಂ ಫಿಝಾ ಮಾಲ್‌ಗಳಲ್ಲಿ ಸಾರ್ವಜನಿಕ ಸಹಿ ಅಭಿಯಾನ ಹಾಗೂ ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್‌ನಲ್ಲಿ ಸಂಜೆ 4ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಆರ್., ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸೂಪರಿಂಡೆಂಟ್ ಲಕ್ಷ್ಮೀಪ್ರಸಾದ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಕೋಸ್ಟಲ್‌ವುಡ್ ಸೆಲೆಬ್ರಿಟಿಗಳಾದ ಪೃಥ್ವಿ ಅಂಬರ್ ಮತ್ತು ನವ್ಯಾ ಪೂಜಾರಿ ಜಾಗೃತಿ ಸಂದೇಶ ನೀಡಲಿದ್ದಾರೆ.
ಅಭಿಯಾನದಲ್ಲಿ ಪಾಲ್ಗೊಳ್ಳಿ: ಸಂಜೆ 4ಗಂಟೆಗೆ ಸಿಟಿ ಸೆಂಟರ್ ಮಾಲ್‌ನಲ್ಲಿ ಕಾರ್ಯಕ್ರಮ ಉದ್ಘಾಟನೆಯಾದ ಬಳಿಕ ಏಕಕಾಲಕಕ್ಕೆ ನಗರ ಫೊರಂ ಫಿಝಾ ಮಾಲ್, ಭಾರತ್ ಮಾಲ್ ಸೇರಿದಂತೆ 3 ಕಡೆಗಳಲ್ಲಿ ಸಹಿ ಅಭಿಯಾನ ನಡೆಯಲಿದೆ. ಸಾರ್ವಜನಿಕರು ಇದರಲ್ಲಿ ಸಹಿ ಮಾಡುವ ಮೂಲಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.