ನೀವು ಗಮನಿಸಿರಬಹುದು. ಈ ಜಾದೂಗಾರ ಅಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲೊಂದಷ್ಟು ಇಸ್ಪೀಟ್ ಕಾರ್ಡ್‌ಗಳು. ಹೌದು, ಇದು ಜಾದುವಿನ ಚುಂಬಕ ಚಿಹ್ನೆ.
ಕಾಲಿ ಕಾರ್ಡ್‌ಗಳನ್ನು ಇಸ್ಪೀಟ್ ಕಾರ್ಡ್‌ಗಳಾಗಿ ಮಾಡುವುದು ಹೇಗೆ? ಇವರ ಕೈಯಲ್ಲೊಂದು ಮಂತ್ರ ದಂಡವೇ ಇರಬೇಕು ಅನ್ನೋ ಅನುಮಾನ ಮತ್ತು ಕೌತುಕ ನೋಡುಗರಿಗೆ ಬರಿಸುವುದೇ ಈ ಇಸ್ಪೀಟ್ ಪ್ರಯೋಗ.
ಜಾದೂಗಾರ ಪ್ಯಾಕಿನಿಂದ ಇಸ್ಪೀಟ್ ಕಾರ್ಡ್‌ಗಳನ್ನು ತೆಗೆದು ಅವುಗಳನ್ನು ಬೀಸಣಿಗೆಯಂತೆ ಬಿಡಿಸಿ ತೋರಿಸುತ್ತಾನೆ. ಆಗ ಎಲ್ಲರೂ ತದೇಕ ಚಿತ್ತದಿಂದ ಅವನ ಕಡೆಯೇ ನೋಡುತ್ತಿರುತ್ತಾರೆ. ಆ ಇಸ್ಪೀಟ್ ಕಾರ್ಡ್‌ಗಳ ಹಿಂಭಾಗದಲ್ಲಿ ಡಿಸೈನ್ ಇರುತ್ತದೆ. ಮುಂಭಾಗ ಖಾಲಿಯಾಗಿರುತ್ತದೆ. ಪುನಃ ಕಾರ್ಡ್‌ಗಳನ್ನು ಒಟ್ಟು ಮಾಡಿ ಪುನಃ ಬೀಸಣಿಗೆಯಂತೆ ಬಿಡಿಸಿದಾಗ ಖಾಲಿ ಕಾರ್ಡುಗಳು ಮಾಮೂಲು ಇಸ್ಪೀಟ್ ಕಾರ್ಡ್‌ಗಳಂತೆ ಪ್ರಿಂಟ್ ಆಗಿರುತ್ತವೆ.
ಇದರ ರಹಸ್ಯ ಇಷ್ಟೆ: ಜೋಕರಿನ ಮುಂಭಾಗಕ್ಕೆ ಬಿಳಿ ಕಾಗದವನ್ನು ಅಂಟಿಸಿ. ಈ ಕಾರ್ಡ್‌ಅನ್ನು ಮುಂಭಾಗದಲ್ಲಿಟ್ಟು ಬಲದಿಂದ ಎಡಕ್ಕೆ ಸ್ವಲ್ಪವೇ ಬಿಡಿಸಿ. ಆಗ ಕಾರ್ಡ್‌ಗಳು ನೋಡುಗರಿಗೆ ಖಾಲಿ, ಖಾಲಿಯಾಗಿ ಕಾಣುತ್ತವೆ. ಇದಕ್ಕೆ ಕಾರಣ ಪ್ಯಾಕಿನ ಯಾವುದೇ ಎಲೆಯ ಮೇಲಿನ ಬಲಭಾಗ ಮತ್ತು ಕೆಳಗಿನ ಎಡಭಾಗ ಖಾಲಿಯಾಗಿರುವುದು. ಜೋಕರಿಗೆ ಕಾಗದ ಅಂಟಿಸಿರುವುದರಿಂದ ಅದೂ ಖಾಲಿಯಾಗಿರುತ್ತದೆ. ಈಗ ರಹಸ್ಯವಾಗಿ ಜೋಕರನ್ನು ತೆಗೆದು ಅಡಗಿಸಿಟ್ಟುಕೊಳ್ಳಿ. ಪ್ಯಾಕನ್ನು ಎಡದಿಂದ ಬಲಕ್ಕೆ ಬಿಡಿಸಿದರೆ ಎಲ್ಲಾ ಕಾರ್ಡುಗಳು ಪ್ರಿಂಟ್ ಆಗಿರುತ್ತವೆ. ಆಗ ಜೋರಾದ ಚಪ್ಪಾಳೆ ನಿಮ್ಮ ಪಾಲಿಗೆ.
ಉದಯ್ ಜಾದೂಗಾರ್