Advertisement

ಸಿಂಧನೂರಿನಲ್ಲಿ ಇಸ್ಪೀಟ್ ಆಟ ಜೋರು!

12:14 PM Jul 16, 2019 | Suhan S |

ಸಿಂಧನೂರು: ಸಿಂಧನೂರು ನಗರ ಸೇರಿ ಸುತ್ತಲಿನ ಕ್ಯಾಂಪ್‌, ಗ್ರಾಮಗಳಲ್ಲಿ ಇಸ್ಪೀಟ್ ಜೂಜಾಟದ ಕ್ಲಬ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇದೊಂದು ದೊಡ್ಡ ಮಾಫಿಯಾವಾಗಿ ಮಾರ್ಪಟ್ಟಿದ್ದು, ಪೊಲೀಸರಿಗೇ ತಲೆನೋವಾಗಿ ಪರಿಣಮಿಸಿದೆ.

Advertisement

ಪಟ್ಟಣ ಮತ್ತು ಸುತ್ತಲಿನ ಹಳ್ಳಿಗಳ ಕೆಲ ಗೋದಾಮುಗಳಲ್ಲಿ ಇಸ್ಪೀಟ್ ಸದ್ದು ಜೋರಾಗಿದೆ. ಇಲ್ಲಿ ಲಕ್ಷಾಂತರ ರೂ.ಗಳವರೆಗೆ ಜೂಜಾಟ ಆಡಲಾಗುತ್ತಿದೆ. ಕೊಪ್ಪಳ, ಗಂಗಾವತಿ, ಬಳ್ಳಾರಿ, ನೆರೆಯ ಆಂಧ್ರದಿಂದಲೂ ದೊಡ್ಡ-ದೊಡ್ಡ ಕುಳಗಳು ಲಕ್ಷಾಂತರ ರೂ.ಗಳನ್ನು ತೆಗೆದುಕೊಂಡು ಬಂದು ಆಡುತ್ತಿದ್ದಾರೆ. ಇವರಿಗೆ ಇಲ್ಲಿ ಮದ್ಯ, ಊಟೋಪಚಾರದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ವ್ಯಕ್ತಿಗಳು, ಪ್ರಭಾವಿಗಳು ಇದ್ದಾರೆ ಎಂಬ ಆರೋಪಗಳಿವೆ. ಇದಕ್ಕೆ ಪುಷ್ಟಿ ಎಂಬಂತೆ ಇತ್ತೀಚೆಗೆ ಕಾಂಗ್ರೆಸ್‌ ಮುಖಂಡರೇ ಸುದ್ದಿಗೋಷ್ಠಿ ನಡೆಸಿ ಇಸ್ಪೀಟ್ ಕ್ಲಬ್‌ಗಳು ರಾಜಾರೋಷವಾಗಿ ನಡೆಯುತ್ತಿವೆ. ಅದರಲ್ಲಿ ನಮ್ಮ ಪಕ್ಷದವರ ಪಾತ್ರ ಇಲ್ಲ ಎನ್ನುವ ಮೂಲಕ ಇಸ್ಪೀಟ್ ದಂಧೆಗೂ ರಾಜಕೀಯ ನಂಟಿನ ಕರಾಳ ಮುಖ ತೋರಿದ್ದಾರೆ.

ತಾಲೂಕಿನಲ್ಲಿ ಇಸ್ಪೀಟ್‌ಗೂ ರಾಜಕೀಯಕ್ಕೂ ನೇರ ಸಂಬಂಧವಿದೆ. ಸಿಪಿಐ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖಂಡರೊಬ್ಬರು ಈ ವಿಷಯವನ್ನು ಬಹಿರಂಗವಾಗಿಯೇ ಪ್ರಸ್ತಾಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ಮರಳು ಮಾಫಿಯಾಗಿಂತಲೂ ಇಸ್ಪೀಟ್ ಮಾಫಿಯಾ ಜೋರಾಗಿದೆ. ಉಗ್ರಾಣಗಳಲ್ಲಿ ಇಸ್ಪೀಟ್ ಕ್ಲಬ್‌ಗಳನ್ನು ನಡೆಸಲು ಪ್ರಭಾವಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದೆಲ್ಲ ಪೊಲೀಸ್‌ ಪೇದೆಗಳಿಂದ ಹಿಡಿದು ಪೊಲೀಸ್‌ ಅಧಿಕಾರಿಗಳಿಗೆ ಗೊತ್ತಿದ್ದರೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಅಂತಹ ಸ್ಥಳಗಳತ್ತ ಹೊರಳಿಯೂ ನೋಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಸಣ್ಣ-ಪುಟ್ಟ ಜನ ಬಲಿ: ಸಾಮಾನ್ಯವಾಗಿ ಅಂಗಡಿ ಮುಂಗಟ್ಟುಗಳಲ್ಲಿ ಇಸ್ಪೀಟ್ ಆಡಲಾಗುತ್ತಿದೆ.ಇಲ್ಲಿ ಕೆಲ ಯುವಕರು, ವ್ಯಾಪಾರಸ್ಥರು ಒಂದೆರಡು ದಿನ ಆಟ ಆಡಿ ನಂತರ ಮತ್ತೆ ತಮ್ಮ ಚಟುವಟಿಕೆ ಕಡೆಗೆ ತಿರುಗುತ್ತಾರೆ. ಪೊಲೀಸರು ಇಂತಹವರ ಮೇಲೆಯೇ ದಾಳಿ ನಡೆಸಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಗೌಪ್ಯ ಸ್ಥಳದಲ್ಲಿ ಇಸ್ಪೀಟ್ ಕ್ಲಬ್‌ಗಳು ರಾಜಾರೋಷವಾಗಿ ನಡೆಯುತ್ತಿವೆ. ತುರ್ವಿಹಾಳ ಎಪಿಎಂಸಿ, ದಢೇಸೂಗೂರು, ಗಾಂಧಿನಗರ, ಹಂಚಿನಾಳ, ಜವಳಗೇರಾ, ಸಿಂಧನೂರಿನ ಕೆಲವು ಆಯ್ದ ಪ್ರದೇಶದ ಉಗ್ರಾಣಗಳಲ್ಲಿ ಇಸ್ಪೀಟ್ ಕ್ಲಬ್‌ಗಳು ನಡೆಯುತ್ತಿವೆ. ಕೋಟ್ಯಧೀಶರೇ ಇಲ್ಲಿ ಜೂಜಾಟ ಆಡುತ್ತಾರೆ. ಪೊಲೀಸರು ದಾಳಿ ನಡೆಸಿದರೆ ಮರ್ಯಾದೆ ಹಾಳು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜಕೀಯ ಶ್ರೀರಕ್ಷೆ ಮತ್ತು ಪೊಲೀಸರೊಂದಿಗೆ ಒಳಒಪ್ಪಂದ ಮಾಡಿಕೊಳ್ಳುವ ಮೂಲಕ ದಂಧೆ ನಡೆಸುತ್ತಿದ್ದಾರೆ. ಬಳ್ಳಾರಿ, ಕೊಪ್ಪಳ, ಆಂಧ್ರಪ್ರದೇಶದ ಕೆಲ ಶ್ರೀಮಂತ ವ್ಯಕ್ತಿಗಳೂ ಆಯ್ದ ಕ್ಲಬ್‌ಗಳಲ್ಲಿ ಜೂಜಾಟ ಆಡುತ್ತಾರೆ. ಇಲ್ಲಿ ಲಕ್ಷಾಂತರ ಹಣ ಜೂಜಾಟಕ್ಕೆ ಇಡಲಾಗುತ್ತಿದೆ.

ಸಂಕಷ್ಟವೋ ಸಂಕಷ್ಟ: ಇಂತಹ ಕ್ಲಬ್‌ಗಳ ಮೇಲೆ ದಾಳಿ ಮಾಡಿದರೆ ಪೊಲೀಸರ ಮೇಲೆ ಪ್ರಭಾವಿಗಳ ಒತ್ತಡ ಬೀಳುತ್ತದೆ. ಜತೆಗೆ, ಅವರನ್ನು ವರ್ಗಾವಣೆ ಮಾಡುವಷ್ಟು ಪ್ರಭಾವ ಇದ್ದವರೇ ಇದರಲ್ಲಿ ಇದ್ದಾರೆ. ಹೀಗಾಗಿ ಪೊಲೀಸರು ಸಣ್ಣಪುಟ್ಟ ಪ್ರಮಾಣದಲ್ಲಿ ಜೂಜಾಟ ಆಡುವವರನ್ನು ಹಿಡಿದು ತಮ್ಮ ಕೇಸ್‌ ಹೆಚ್ಚಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಒಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

Advertisement

ಬೇಡವೇ ಬೇಡ ನೌಕರಿ: ಸಿಂಧನೂರಿನಲ್ಲಿ ನಡೆಯುವ ಇಸ್ಪೀಟ್ ಮಾಫಿಯಾ ಕಾಟಕ್ಕೆ ಪೊಲೀಸ್‌ ಇಲಾಖೆ ಅಧಿಕಾರಿಗಳೇ ನಲುಗಿ ಹೋಗಿದ್ದಾರೆ. ಜಗಳ, ಹೊಡೆದಾಟದಂತಹ ಪ್ರಕರಣಗಳನ್ನು ಹೇಗಾದರೂ ನಿಭಾಯಿಸಬಹುದು. ಆದರೆ, ಊರಿನಲ್ಲಿ ಇದೆಷ್ಟು ಇಸ್ಪೀಟ್ ಕಾಟ? ಎಂದು ಗುನುಗುತ್ತಿದ್ದಾರೆ. ಒಬ್ಬರಾಗುತ್ತಿದ್ದಂತೆ ಮತ್ತೂಂದು ರಾಜಕೀಯ ಪಕ್ಷದವರು ಇದೇ ದೂರು ಹಿಡಿದುಕೊಂಡು ಪೊಲೀಸರನ್ನು ಪ್ರಶ್ನಿಸುತ್ತಾರೆ. ಈ ಹಿಂದೆಯೂ ಒಂದು ಪಕ್ಷದವರ ಕ್ಲಬ್‌ ಬಂದ್‌ ಮಾಡಿಸಿದ್ದರೆ, ಮತ್ತೂಂದು ಪಕ್ಷದ ಕ್ಲಬ್‌ ಬಂದ್‌ ಮಾಡಿಸಿಲ್ಲ ಎಂದು ಜಗಳವಾಡಿದ್ದರು. ಈಗಲೂ ಸಹ ಇದೇ ರೀತಿ ಜಗಳಗಳು ನಡೆದಿದ್ದು, ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಪೊಲೀಸರು.

ಇಸ್ಪೀಟ್ ಹಾಗೂ ಜೂಜಾಟದ 42 ಪ್ರಕರಣಗಳನ್ನು ದಾಖಲು ಮಾಡಿದ್ದೇವೆ. ಕದ್ದು ಮುಚ್ಚಿ ಯಾರಾದರೂ ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿರುವುದು ನಮ್ಮ ಗಮನಕ್ಕೆ ಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆ ಮುಂದಾಗುತ್ತದೆ. ಯಾರೇ ಇರಲಿ ಕಾನೂನಿಗೆ ತಲೆಬಾಗಲೇಬೇಕು.•ವಿಶ್ವನಾಥ ಕುಲಕರ್ಣಿ, ಡಿವೈಎಸ್ಪಿ, ಸಿಂಧನೂರು

ಇಸ್ಪೀಟ್ ಆಟದ ಬಗ್ಗೆ ಎಸ್‌ಪಿ ಮತ್ತು ಡಿವೈಎಸ್‌ಪಿಗಳು ಎಚ್ಚರಗೊಳ್ಳಬೇಕು. ಜಿಲ್ಲೆಯ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕೆಲಸ ಮಾಡುವ ಅಧಿಕಾರಿಗಳಾಗದೇ ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಇದು ಹೀಗೇ ಮುಂದುವರಿದರೆ, ಜನಸಾಮಾನ್ಯರ ನೇತೃತ್ವದಲ್ಲಿ ಇಸ್ಪೀಟ್ ವಿರುದ್ಧವೇ ಹೋರಾಟ ಅನಿವಾರ್ಯವಾಗುತ್ತದೆ.•ನಾಗರಾಜ ಪೂಜಾರ,ಕ್ರಾಂತಿಕಾರಿ ಯುವಜನ ರಂಗ ರಾಜ್ಯ ಘಟಕದ ಅಧ್ಯಕ್ಷ ಸಿಂಧನೂರು

 

•ಚಂದ್ರಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next