ಮೈಸೂರು: ಭಾರತದಲ್ಲಿ ಹೃದ್ರೋಗ ಚಿಕಿತ್ಸಾ ವ್ಯವಸ್ಥೆ ವಿದೇಶಕ್ಕಿಂತ ಚೆನ್ನಾಗಿದ್ದು, ಗುಣಮಟ್ಟದ ಚಿಕಿತ್ಸೆಯನ್ನು ತ್ವರಿತವಾಗಿ ನೀಡುವುದರಲ್ಲಿ ಭಾರತ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರಿನ ಜಯದೇವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಎಕೋ ಆಂಜಿಯೋಟೆಸ್ಟ್ ಮಾಡಲು 2 ರಿಂದ 3 ವಾರ ಬೇಕಾಗುತ್ತದೆ. ವಿದೇಶದಲ್ಲಿ ವಿಮೆ ಇಲ್ಲದೆ ಆಪರೇಷನ್ ಮಾಡುವುದಿಲ್ಲ. ಫಿಜಿಶಿಯನ್ ರೆಫರ್ ಮಾಡಬೇಕು.
ಆದರೆ, ಜಯದೇವ ಆಸ್ಪತ್ರೆಯಲ್ಲಿ 1 ರಿಂದ 2 ದಿವಸದಲ್ಲಿ ಆಫರೇಷನ್ ಮಾಡುತ್ತೇವೆ. ಭಾರತದ ವೈದ್ಯರು 5 ರಿಂದ 6 ಗಂಟೆ ಹೆಚ್ಚು ಕೆಲಸ ಮಾಡುತ್ತಾರೆ. ಭಾರತದಲ್ಲಿ ಯಾವುದೇ ರೋಗಿಯನ್ನು ಬೆಡ್ ಇಲ್ಲ ಎಂದು ಹಿಂದಕ್ಕೆ ಕಳುಹಿಸುವುದಿಲ್ಲ. ಏನಾದರೂ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಭಾರತದಲ್ಲಿನ ಜನರ ಜೀವನ ಶೈಲಿ ಬದಲಾಗುತ್ತಿದ್ದು, ಮನುಷ್ಯನ ಸೋಮಾರಿತನ, ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಹೃದಯರೋಗ, ಸಕ್ಕರೆ ಕಾಯಿಲೆಗಳು ಹೆಚ್ಚಾಗುತ್ತಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತುರ್ತು ಚಿಕಿತ್ಸೆಗಾಗಿ ರೋಗಿಗಳು ಬಂದಾಗ ವೈದ್ಯರಿಗೆ ಸಾರ್ವಜನಿಕರು ಸಹಕಾರ ನೀಡಬೇಕು.
ತಾಳ್ಮೆ ಕಳೆದುಕೊಂಡು ಹಲ್ಲೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ಜಯದೇವ ಆಸ್ಪತ್ರೆಯಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಮೊದಲು ಟ್ರೀಟ್‌ಮೆಂಟ್ ನಂತರ ಪೇಮೆಂಟ್ ಎಂಬ ಧ್ಯೇಯವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.
ಡಾ.ರವೀಂದ್ರನಾಥ್, ಚಂದ್ರಶೇಖರ್, ಡಾ.ಸದಾನಂದ, ಡಾ.ಪಾಂಡುರಂಗಯ್ಯ, ಡಾ.ಸಂತೋಷ್, ಡಾ. ವೀಣಾನಂಜಪ್ಪ, ಡಾ.ನರೇಂದ್ರ, ಡಾ.ದೇವರಾಜ್, ಡಾ.ಭಾರತಿ, ಡಾ.ಜಯಪ್ರಕಾಶ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಒ ವಾಣಿ ಮೋಹನ್ ಎ.ಕೆ. ಡೇ ಈ ಸಂದರ್ಭದಲ್ಲಿ ಹಾಜರಿದ್ದರು.