Advertisement
ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಸಿದ್ಧಗಿರಿ ಧರ್ಮ ಆಸ್ಪತ್ರೆ ಸರ್ಕಾರಿ ಯೋಜನೆಗಳಲ್ಲಿ ಬಡವರಿಗೆ ಉಚಿತ ಸೇವೆ ಜತೆಗೆ, ಎಲ್ಲ ವರ್ಗಗಳ ಜನರಿಗೂ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆಯ ಧರ್ಮಾರ್ಥ ಸೇವೆಯಲ್ಲಿ ತೊಡಗಿಕೊಂಡಿದೆ. ನಿತ್ಯವೂ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೂರಾರು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಸಿದ್ಧಗಿರಿ ಧರ್ಮ ಆಸ್ಪತ್ರೆ ದೇಶದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಹೃದಯಕ್ಕೆ ಸಂಬಂಧಿಸಿದ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳು ಹಾಗೂ ದೇಶದಲ್ಲೇ ಖ್ಯಾತವೆತ್ತ ವೈದ್ಯ ಸೇವೆಯನ್ನು ಜನರಿಗೆ ನೀಡುವ ಕಾರ್ಯ ಮಾಡುತ್ತಿದೆ.
Related Articles
Advertisement
ರೋಗಿಗೆ ಆಸ್ಪ್ರತ್ರೆಯಲ್ಲಿ ಊಟ ದೊರೆತರೆ, ರೋಗಿಯ ಜತೆ ಬಂದವರಿಗೆ ಶ್ರೀಮಠದಲ್ಲಿ ಉಚಿತ ಪ್ರಸಾದ ದೊರೆಯುತ್ತದೆ. ಚಿಕಿತ್ಸೆ ಅಗತ್ಯ ಇದ್ದವರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಧಾರ ಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ ಚಿಕಿತ್ಸೆ ಪಡೆಯಲು ನಿಯಮದಡಿಯಲ್ಲಿ ಇರುವ ದಾಖಲಾತಿ, ಶಿಫಾರಸು ಪತ್ರಗಳನ್ನು ತೆಗೆದುಕೊಂಡು ಹೋದರೆ ಸಾಕು, ಚಿಕಿತ್ಸೆ ದೊರೆಯಲಿದೆ. ಸಿದ್ಧಗಿರಿ ಧರ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಮಾಹಿತಿಗಾಗಿ (ಮೊ.09764765628/ 09403667177)ಗೆ ಸಂಪರ್ಕಿಸಬಹುದಾಗಿದೆ.
50 ಸಾವಿರ ರೂ.ಗೆ ಎಂಜಿಯೋಪ್ಲಾಸ್ಟ್ : ಎಂಜಿಯೋಪ್ಲಾಸ್ಟ್ ಮಾಡಿಸಲು ಸಿದ್ಧಗಿರಿ ಧರ್ಮ ಆಸ್ಪತ್ರೆಯಲ್ಲಿ ವಿದೇಶದ ಸ್ಟೆಂಟ್ ಸೇರಿದಂತೆ ಒಟ್ಟಾರೆ ಅಳವಡಿಕೆ ಹಾಗೂ ಔಷಧಿ ಸೇರಿ ಕೇವಲ 50 ಸಾವಿರ ರೂ.ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಕಡೆಗಳಲ್ಲಿ ಇದಕ್ಕೆ ಹೆಚ್ಚಿನ ಹಣ ಪಡೆಯಲಾಗುತ್ತಿದೆಯಾದರೂ, ಹೆಚ್ಚಿನ ಹಣ ಕೊಡಲು ಸಾಧ್ಯವಾಗದ ಮಧ್ಯಮ ವರ್ಗ ಕುಟುಂಬಗಳಿಗೆ ಇದು ಪ್ರಯೋಜನಕಾರಿ ಆಗಲಿದೆ. ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೂ ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ಶೇ.50ರಷ್ಟು ಕಡಿಮೆ ದರದಲ್ಲಿ ಚಕಿತ್ಸೆ ದೊರೆಯುತ್ತಿದೆ.
ದುಬಾರಿ ವೆಚ್ಚದ ಕಾರಣಕ್ಕೆ ಬಡವರು, ನಿರ್ಗತಿಕರು ಆರೋಗ್ಯ ಸೇವೆಯಿಂದ ವಂಚಿತರಾಗಬಾರದು, ಪರಿತಪಿಸಬಾರದು ಎಂಬ ಉದ್ದೇಶದಿಂದ ಸಿದ್ಧಗಿರಿ ಧರ್ಮ ಆಸ್ಪತ್ರೆ ಸರ್ಕಾರಿ ಯೋಜನೆಗಳಲ್ಲದೆ, ಇತರರಿಗೂ ಅತ್ಯಂತ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದೆ. ಹೃದ್ರೋಗ, ನರ ಸಂಬಂಧಿ ಇನ್ನಿತರ ಶಸ್ತ್ರಚಿಕಿತ್ಸೆಗಳಿಗೆ ಶೇ.40-50ರಷ್ಟು ಕಡಿಮೆ ವೆಚ್ಚದಲ್ಲಿ ಸೇವೆ ದೊರೆಯುತ್ತಿದೆ. ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ಕೇವಲ 3 ಸಾವಿರ ರೂ.ಗಳಲ್ಲಿ ಮಾಡಲಾಗುತ್ತಿದೆ. ಕರ್ನಾಟಕದವರು ಅದರಲ್ಲೂ ಉತ್ತರ ಕರ್ನಾಟಕದವರು ಇದರ ಪ್ರಯೋಜನ ಪಡೆಯದುಕೊಳ್ಳಬಹುದು. –ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ
-ಅಮರೇಗೌಡ ಗೋನವಾರ