Advertisement

ಉಡುಪಿ ಜಿಲ್ಲೆಯ 21 ಸರಕಾರಿ ಆಸ್ಪತ್ರೆಗೆ ಇಸಿಜಿ ಯಂತ್ರ

10:34 AM Nov 03, 2018 | Team Udayavani |

ಕುಂದಾಪುರ: ಕೆಎಂಸಿಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌ ಅವರು ರೂಪಿಸಿದ “ಕಾರ್ಡಿಯಾಲಜಿ ಎಟ್‌ ಡೋರ್‌ ಸ್ಟೆಪ್‌’ (ಮನೆ ಬಾಗಿಲಿಗೆ ಹೃದ್ರೋಗ ಚಿಕಿತ್ಸೆ) ವಾಟ್ಸಾಪ್‌ ವೈದ್ಯಕೀಯ ಬಳಗದ ಮೂಲಕ ಸರಕಾರಿ ಆಸ್ಪತ್ರೆಗಳಿಗೆ ಇಸಿಜಿ ಯಂತ್ರ ನೀಡುವ ಕಾರ್ಯ ಮುಂದುವರಿದಿದ್ದು, ಈ ದೀಪಾವಳಿಗೆ ಉಡುಪಿ ಜಿಲ್ಲೆಯ 21 ಸರಕಾರಿ ಆಸ್ಪತ್ರೆಗಳಿಗೆ ವಿತರಣೆ ನಡೆಯಲಿದೆ. 

Advertisement

ಡಾ| ಕಾಮತರು ಈ ವಾಟ್ಸಾಪ್‌ ಬಳಗ ರಚಿಸಿದ್ದು, ಕೊಡಗು, ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡದ 250 ವೈದ್ಯರು, ಈ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು ಸದಸ್ಯರಾಗಿದ್ದರು. ಮಂದಾರ್ತಿ, ಶಂಕರನಾರಾಯಣ, ತ್ರಾಸಿ, ತೆಕ್ಕಟ್ಟೆ, ತಲ್ಲೂರು, ಬಾಕೂರು, ಉಪ್ಪುಂದ, ಸಿದ್ದಾಪುರದಂತಹ ಗ್ರಾಮಾಂತರ ಪ್ರದೇಶದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು, ಐದು ಜಿಲ್ಲೆಗಳ ಆ್ಯಂಬುಲೆನ್ಸ್‌ ಚಾಲಕರಿದ್ದಾರೆ. ಎಂಬಿಬಿಎಸ್‌, ಆಯುಷ್‌ನ ಆಯುರ್ವೇದ, ಯುನಾನಿ, ಅಲೋಪತಿಯವರಿಗೂ ಸದಸ್ಯತ್ವದ ಅವಕಾಶ ಇದೆ. ವೈದ್ಯಕೀಯ ಹಾಗೂ ಹೃದ್ರೋಗ ಸಂಬಂಧಿ ಮಾಹಿತಿ ವಿನಿಮಯಕ್ಕಷ್ಟೇ ಸೀಮಿತವಾಗಿ ಮನೆಬಾಗಿಲಿನಲ್ಲಿ ಹೃದ್ರೋಗ ಚಿಕಿತ್ಸೆ ನೀಡುತ್ತಿದೆ. ಈ ಬಳಗ ಅನಂತರದ ದಿನಗಳಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿದೆ. 

ಬೆಳವಣಿಗೆ
ಬಳಗ ಆರಂಭವಾದ ಆರೇ ತಿಂಗಳಲ್ಲಿ 6 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಿಗೆ ಇಸಿಜಿ ಯಂತ್ರಗಳನ್ನು ಕರ್ಣಾಟಕ ಬ್ಯಾಂಕ್‌ ಸಹಿತ ವಿವಿಧ ದಾನಿಗಳ ನೆರವಿನಿಂದ ನೀಡ ಲಾಗಿದೆ. ಈ ಯಾವುದೇ ಸಾಮಾನ್ಯ ಆಸ್ಪತ್ರೆಯಲ್ಲಿ, ಸರಕಾರಿ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿ ಕೊಳ್ಳ ಬಹುದು. ಇದನ್ನನುಸರಿಸಿ ಹೃದಯದ ಸ್ಥಿತಿಗತಿ ಗಮನಿಸಿ ಅಗತ್ಯ ಚಿಕಿತ್ಸೆ ಅಲ್ಲೇ ಲಭ್ಯವಿದ್ದರೆ ದೊಡ್ಡ ಆಸ್ಪತ್ರೆಗಳ ಸಹವಾಸ ತಪ್ಪುತ್ತದೆ. ಈ ವಾಟ್ಸಾಪ್‌ ಗ್ರೂಪ್‌ ಆರಂಭಿಸಿ ದಾಗ “ಉದಯವಾಣಿ’ ವರದಿ ಮಾಡಿತ್ತು.

ಎಲ್ಲೆಲ್ಲಿ ?
ದೀಪಾವಳಿಗೆ ಕಾರ್ಕಳ ತಾ|ನ ಹಿರ್ಗಾನ, ಮಾಳ, ಇರ್ವತ್ತೂರು, ಬೈಲೂರು, ಈದು, ಕುಕ್ಕುಂದೂರು, ಕುಂದಾಪುರ ತಾ|ನ ಬೈಂದೂರು, ಶಿರೂರು, ಕಿರಿಮಂಜೇಶ್ವರ, ಗಂಗೊಳ್ಳಿ, ಕುಂಭಾಶಿ, ಬಸ್ರುರೂ, ಕಂಡೂರು, ಸಿದ್ದಾಪುರ, ಹಳ್ಳಿಹೊಳೆ, ಹಾಲಾಡಿ, ಬೆಳ್ವೆ, ಬಿದ್ಕಲ್‌ಕಟ್ಟೆ, ನಾಡ, ಕೊರ್ಗಿ, ಉಡುಪಿ ತಾ|ನ ಕೆಮ್ಮಣ್ಣು ಆಸ್ಪತ್ರೆಗಳಿಗೆ ನ.6, 7, 8ರಂದು ವಿತರಿಸಲಾಗುವುದು.

ಶತಕದೆಡೆಗೆ
ಡಿಸೆಂಬರ್‌ ಅಂತ್ಯದೊಳಗೆ 100 ಇಸಿಜಿ ಯಂತ್ರಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಕಾಸರಗೋಡು, ದ.ಕ. ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದ 34 ಕಡೆ ಇಸಿಜಿ ಯಂತ್ರ ನೀಡಲಾಗಿದೆ. ಕಾಸರಗೋಡಿನಲ್ಲಿ 15, ಕುಂದಾಪುರ 15, ಕಾರ್ಕಳ 8, ಉತ್ತರಕನ್ನಡ 8, ಚಿಕ್ಕಮಗಳೂರು 7, ಶಿವಮೊಗ್ಗ 5, ತೀರ್ಥಹಳ್ಳಿ 7, ಮಂಗಳೂರಿನ ಬೀಡಿ ಕಾರ್ಮಿಕರ ಆಸ್ಪತ್ರೆಗೆ 2 ಇಸಿಜಿ ಯಂತ್ರಗಳನ್ನು ನೀಡಲಾಗುತ್ತಿದೆ. 

Advertisement

ದೇಶಾದ್ಯಂತ ಆಗಲಿ
ಜನೌಷಧಿ ಕೇಂದ್ರಗಳಿಗೂ ಇಸಿಜಿ ಯಂತ್ರ ವಿತರಿಸಲಾಗಿದೆ. ಅನೇಕ ದಾನಿಗಳು ಇಸಿಜಿ ಯಂತ್ರ ನೀಡುತ್ತಿದ್ದು, ಯಾರಿಗೂ ಹೊರೆಯಾಗುವುದಿಲ್ಲ. ಈ ಅಭಿಯಾನ ದೇಶಾದ್ಯಂತ ನಡೆಯಬೇಕು. ಸೌಲಭ್ಯ ಇಲ್ಲದೆಡೆ ಹೃದ್ರೋಗಿಗಳು ಜೀವ ಕಳೆದುಕೊಳ್ಳುವಂತಾಗಬಾರದು. ಅಂತಹವರಿಗೆ ನೆರವಾಗಬೇಕು.
ಡಾ| ಪದ್ಮನಾಭ ಕಾಮತ್‌, ಹೃದ್ರೋಗ ವಿಭಾಗ ಮುಖ್ಯಸ್ಥರು, ಕೆಎಂಸಿ

Advertisement

Udayavani is now on Telegram. Click here to join our channel and stay updated with the latest news.

Next