Advertisement
ಮಾಲೆ ತಯಾರಿಸಲು ಅಗತ್ಯವಿರುವ ಒಂದೇ ಗಾತ್ರದ ಮೊಗ್ಗು ಮಾದರಿಯ ಏಲಕ್ಕಿಯನ್ನು ಮಡಿಕೇರಿ, ತಮಿಳುನಾಡಿನ ಗುಂಡಿನಾಯಕನೂರು ಹಾಗೂ ಕೇರಳ ರಾಜ್ಯಗಳಿಂದ ತರಿಸಿ ಏಲಕ್ಕಿಮಾಲೆ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೇರಳ, ಮಡಿಕೇರಿಗಳಲ್ಲಿ ಉಂಟಾದ ಪ್ರವಾಹದ ಪರಿಣಾಮ ಏಲಕ್ಕಿ ಬೆಳೆ ಹಾಳಾಗಿರುವುದರಿಂದ ವಿಶಿಷ್ಟ ಗಾತ್ರದ ಏಲಕ್ಕಿ ಸಿಗದೆ ಮಾಲೆ ತಯಾರಕರು ಪರಿತಪಿಸುವಂತಾಗಿದೆ.
Related Articles
Advertisement
ಏಲಕ್ಕಿ ಮಾಲೆ ಖ್ಯಾತಿ: ಏಲಕ್ಕಿ ಮಾಲೆ ತನ್ನದೇ ಆದ ವಿಶೇಷ ಅಲಂಕಾರ, ಸುವಾಸನೆಯಿಂದ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾವೇರಿಯ “ಏಲಕ್ಕಿ ಮಾಲೆ’ ದೇಶದ ಪ್ರಧಾನಿಯಿಂದ ಹಿಡಿದು ಎಲ್ಲ ಗಣ್ಯರ ಕೊರಳನ್ನು ಅಲಂಕರಿಸಿ, ಅಭಿನಂದಿಸಿದ ಕೀರ್ತಿ ಹೊಂದಿದೆ. ಅಷ್ಟೇ ಅಲ್ಲ ಅಮೇರಿಕ, ಲಂಡನ್, ಜಪಾನ್, ದಕ್ಷಿಣ ಆಫ್ರಿಕಾ, ಉತ್ತರ ಕೋರಿಯಾ, ನೇಪಾಳ, ಸೌದಿ ಅರಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಹಾವೇರಿಯ ಏಲಕ್ಕಿ ಮಾಲೆಗೆ ಖ್ಯಾತಿ ಪಡೆದಿದ್ದು, ಈಗಲೂ ಏಲಕ್ಕಿ ಮಾಲೆಗೆ ಭಾರಿ ಬೇಡಿಕೆ ಇದೆ. ಆದರೆ, ಪ್ರಸ್ತುತ ಏಲಕ್ಕಿಮಾಲೆ ಏಲಕ್ಕಿ ಕೊರತೆ ಎದುರಿಸುತ್ತಿದೆ.
ಏಲಕ್ಕಿ ಮಾಲೆ ತಯಾರಿಕೆ ಒಂದು ವಿಶಿಷ್ಟ ಕಲೆ. ಅತ್ಯುತ್ತಮ ದರ್ಜೆಯ ಮತ್ತು ದುಂಡಗಿನ ಏಲಕ್ಕಿಗಳನ್ನು ಕೇರಳ, ಮಡಿಕೇರಿ, ಸಕಲೇಶಪುರದಿಂದ ತಂದು ಒಂದು ವಾರದವರೆಗೆ ಬ್ಲೀಚಿಂಗ್ ಪೌಡರ್ ಬೆರೆಸಿದ ಲವಣಯುಕ್ತ ನೀರಿನಲ್ಲಿ ತೊಳೆಯಲಾಗುತ್ತದೆ. ನಂತರ ಒಣಗಿಸಿದಾಗ ಅದು ಬಿಳಿಯಾಗಿ ಹೊಳೆಯುತ್ತದೆ. ಏಲಕ್ಕಿ ಜತೆಗೆ ಅಲಂಕಾರಿಕ ವಸ್ತುಗಳಾದ ರೇಷ್ಮೆ ಎಳೆಗಳು, ಮಣಿಗಳು ಮತ್ತು ಉಣ್ಣೆ ದಾರದಿಂದ ಹೂಮಾಲೆಗಳನ್ನು ಅಲಂಕರಿಸುವ ಮೂಲಕ ಆಕರ್ಷಣೀಯಗೊಳಿಸಲಾಗುತ್ತದೆ. ಈ ವಿಶಿಷ್ಟ ಏಲಕ್ಕಿಮಾಲೆ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹದಿಂದ ಮಾಲೆ ತಯಾರಿಕೆ ಬೇಕಾದ ಏಲಕ್ಕಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಕೊರತೆಯಾಗಿರುವುದರಿಂದ ಏಲಕ್ಕಿ ದರವೂ ಅತಿ ಹೆಚ್ಚಾಗಿದೆ. ಅದರ ಪರಿಣಾಮ ಏಲಕ್ಕಿ ಮಾಲೆ ದರವೂ ಹೆಚ್ಚಾಗಿದ್ದು ಜನರು ಹೆಚ್ಚು ಹಣ ಕೊಟ್ಟು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮಾಲೆ ತಯಾರಿಕೆ ಉದ್ಯಮ ನಷ್ಟ ಅನುಭವಿಸುವಂತಾಗಿದೆ. –ಹಜಿಉಸ್ಮಾನ್ಸಾಬ ಪಟವೆಗಾರ, ಏಲಕ್ಕಿ ಮಾಲೆ ತಯಾರಕರು ಹಾವೇರಿ.
-ಎಚ್.ಕೆ. ನಟರಾಜ