ಸಕಲೇಶಪುರ: ಸಂಬಾರ ಪದಾರ್ಥಗಳ ರಾಣಿ, ಆರೋಗ್ಯ ಸಂಜೀವಿನಿ ಎಂದೇ ಹೆಸರಾದ ಏಲಕ್ಕಿ ದರ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ. ಕೆ.ಜಿ. ಏಲಕ್ಕಿ 2,000ದಿಂದ 3,000 ರೂ.ಗೆ ಏರಿಕೆ ಆಗಿದ್ದು ಬೆಳೆಗಾರರಿಗೆ ಸಂತಸ ತಂದರೆ, ಗ್ರಾಹಕರಿಗೆ ಹೊರೆಯಾಗಿದೆ.
ಕಳೆದ ಮೂರು ತಿಂಗಳಿನಲ್ಲಿ 1,000 ರೂ. ಬೆಲೆ ಏರಿಸಿಕೊಂಡಿದ್ದ ಏಲಕ್ಕಿ, ಈಗ ದೇಶಿ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 2,800ರಿಂದ 3,000 ರೂ. ವರೆಗೂ ಮಾರಾಟವಾಗುತ್ತಿದೆ.
ಜಗತ್ತಿನಲ್ಲಿ ಮೂರೇ ಮೂರು ದೇಶಗಳು ಮಾತ್ರ ಏಲಕ್ಕಿ ಹೆಚ್ಚು ಉತ್ಪಾದನೆ ಮಾಡುತ್ತವೆ. ಭಾರತ ಏಲಕ್ಕಿ ಉತ್ಪಾದನೆಯಲ್ಲಿ (40,000 ಟನ್) ಮೊದಲ ಸ್ಥಾನದಲ್ಲಿ ಇದ್ದರೂ ರಫ್ತು ಮಾಡುತ್ತಿರುವುದು ಕೇವಲ 11 ಸಾವಿರ ಟನ್ ಮಾತ್ರ. ಇಂಡೊನೇಷ್ಯಾ 38,000 ಟನ್ ಉತ್ಪಾದನೆ, ಗ್ವಾಟೆಮಾಲ 37,000 ಟನ್ ಉತ್ಪಾದನೆ ಯೊಂದಿಗೆ ತೃತೀಯ ಸ್ಥಾನದಲ್ಲಿವೆ. ಗ್ವಾಟೆಮಾಲದಲ್ಲಿ ಹವಾಮಾನ ವೈಪರೀತ್ಯದಿಂದ ಶೇ. 45ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಭಾರತದಲ್ಲೂ ಶೇ. 50ಕ್ಕೂ ಹೆಚ್ಚು ಉತ್ಪಾದನೆ ಕುಂಠಿತವಾಗಿದೆ. ಕೇರಳ, ಕರ್ನಾಟಕದ ಚಿಕ್ಕಮಗಳೂರು, ಮಡಿಕೇರಿ, ಹಾಸನದ ಸಕಲೇಶಪುರ, ಈಶಾನ್ಯ ರಾಜ್ಯಗಳಲ್ಲಿ ಏಲಕ್ಕೆ ಬೆಳೆಯಲಾಗುತ್ತಿದೆ.
ಬೇಡಿಕೆ ಹೆಚ್ಚಿದರೆ
ಮತ್ತಷ್ಟು ದರ ಏರಿಕೆ?
ಕೊಲ್ಲಿ ರಾಷ್ಟ್ರಗಳೇ ಭಾರತದ ಪ್ರಮುಖ ಗ್ರಾಹಕರು. ರಮ್ಜಾನ್ ಹಬ್ಬಕ್ಕೂ ಮುಂಚಿತವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಫೆಬ್ರವರಿ 2025ರ ವೇಳೆಗೆ ಏಲಕ್ಕಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶದಲ್ಲೂ ಬೇಡಿಕೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. 2025ರ ಜನವರಿಯಿಂದ ಮಾರ್ಚ್‌ನಲ್ಲಿ ಭಾರತೀಯ ಏಲಕ್ಕಿ ಬೆಲೆ ಪ್ರತಿ ಕೆ.ಜಿ.ಗೆ 3,500 ರೂ. ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹವಾಮಾನ ವೈಪರೀತ್ಯದಿಂದ ಏಲಕ್ಕಿ ಉತ್ಪಾದನೆ ಈ ಬಾರಿ ಶೇ. 50 ಕಡಿಮೆಯಾಗಿದೆ. ಏಲಕ್ಕಿಗೆ ಉತ್ತಮ ದರ ಸಿಕ್ಕಿದ್ದರೂ ಬೆಳೆಗಾರರಿಗೆ ಮಾತ್ರ ಇದರಿಂದ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ ಎನ್ನುತ್ತಾರೆ ಏಲಕ್ಕಿ ಬೆಳೆಗಾರರ ಸಂಘದ ಅಧ್ಯಕ್ಷ ಕುಶಾಲಪ್ಪ.
-2,000ದಿಂದ 3,000 ರೂ.ಗೆ ಜಿಗಿದ ಕೆ.ಜಿ. ಏಲಕ್ಕಿ ದರ
-ಗುಣಮಟ್ಟದಲ್ಲಿ ಭಾರತದ ಏಲಕ್ಕಿಗೆ ಅಗ್ರಸ್ಥಾನ
-ಹವಾಮಾನ್ಯ ವೈಪರೀತ್ಯ, ಗ್ವಾಟೆಮಾಲದಲ್ಲಿ ಉತ್ಪಾದನೆ ಕುಂಠಿತ ಕಾರಣ
– ಸುಧೀರ್ ಎಸ್.ಎಲ್.