ಬೆಳ್ತಂಗಡಿ: ಜೀವಜಲ, ಪರಿಸರದ ಮಹತ್ವ ಮನಗಾಣುವ ಸಲುವಾಗಿ ಸ್ವಾಭಾವಿಕವಾಗಿ ಜಲ ಮರು ಪೂರಣಕ್ಕೆ ಮಹತ್ವ ನೀಡಿರುವ ಶಾಲೆ ಯಾಗಿ ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಮುಂಚೂಣಿ ಯಲ್ಲಿದೆ. ಜಲ ಮರುಪೂರಣ, ಸ್ವಚ್ಛ ಮೇವ ಜಯತೇ ಅಭಿಯಾನ ದೊಂದಿಗೆ, ನೆಲ – ಜಲ ಸಂರಕ್ಷಣೆಗಾಗಿ ಮಕ್ಕಳ ಮೂಲಕ ಇದೀಗ ವಿನೂತನವಾಗಿ ಕಾರ್ಡ್ ಚಳವಳಿ ಹಮ್ಮಿಕೊಂಡಿದೆ.
ಕಾರ್ಡ್ ಚಳವಳಿ ಮಹತ್ವ
ಎಳವೆಯಲ್ಲಿಯೇ ಜಲ ಮರು ಪೂರಣ ಜಾಗೃತಿ ಮೂಡಿಸುವ ದೃಷ್ಟಿ ಯಿಂದ ಮನೆ ವಠಾರದಲ್ಲಿ ನೀರಿಂಗಿ ಸುವಿಕೆ ಮತ್ತು ಅದರ ಪ್ರಯೋಜನ ಕುರಿತು ಮಕ್ಕಳಿಂದ ಕಾರ್ಡ್ ಚಳವಳಿ ಹಮ್ಮಿಕೊಂಡಿದೆ. ಒಬ್ಬ ವಿದ್ಯಾರ್ಥಿ ಒಂದು ಕಾರ್ಡ್‌ನಂತೆ ಮಿತ್ರರಿಗೆ ಹಾಗೂ ಶಾಲೆಯಿಂದ ಮಕ್ಕಳ ಮೂಲಕ ಅವರ ಸಂಬಂಧಿಗಳಿಗೆ ಕಾರ್ಡ್ ಚಳವಳಿ ಕೈಗೊಂಡಿದ್ದು, ಇದಕ್ಕಾಗಿ ಪ್ರತ್ಯೇಕ ಸಮೀಕ್ಷಾ ಪತ್ರವನ್ನು ರಚಿಸಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಕಾರ್ಡ್ ಚಳವಳಿ ನಡೆಸಿ ಮನೆ-ಮನಗಳಲ್ಲಿ ಜಾಗೃತಿಯ ಮಹತ್ಕಾರ್ಯ ನಡೆಸಿದೆ.
ಶಾಲೆಗೆ ತಲುಪಿದೆ ಸಮೀಕ್ಷೆ ಪತ್ರ
ಮನೆಯಲ್ಲಿ ತಾವು ಜಲ ಸಂರಕ್ಷಣೆಗೆ ಕೈಗೊಂಡ ಕ್ರಮಗಳು ಮತ್ತು ಸ್ವಚ್ಛತೆಗೆ ಅನುಸರಿಸಿದ ನೂತನ ವಿಧಾನಗಳು ಸಹಿತ ಸಮೀಕ್ಷಾ ಪತ್ರದಲ್ಲಿ ತಿಳಿಸುತ್ತಿದ್ದಾರೆ. ಶಾಲೆಯಿಂದ ಆರಂಭಗೊಂಡ ಜಾಗೃತಿ ವಿದ್ಯಾರ್ಥಿಗಳ ಮೂಲಕ ಹೆತ್ತವರಿಗೂ ಅರಿವು ಮೂಡಿಸುವ ಶಿಕ್ಷಕರ ವಿಭಿನ್ನ ಕಲ್ಪನೆ ಯಶ ಕಂಡಿದೆ. ಇಂತಹ ಪರಿಕಲ್ಪನೆ ಪ್ರತಿ ಶಾಲೆಗಳಲ್ಲೂ ಹಮ್ಮಿಕೊಂಡಲ್ಲಿ ಜೀವಜಲದ ಕೊರತೆ ಕಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಶಿಕ್ಷಕರು.
ಶಾಸಕರಿಂದಲೂ ಶ್ಲಾಘನೆ
ಶಾಸಕ ಹರೀಶ್ ಪೂಂಜ ಅವರು ಬೆಳಾಲು ಶಾಲೆಯ ಜಲ ಮರುಪೂರಣ ಕಾರ್ಯದ ಮಾಹಿತಿ ಪಡೆದು ಶ್ಲಾಘಿಸಿದ್ದಾರೆ.
ಅಭಿಯಾನ ಯಶಸ್ವಿ
ಶಾಲೆಯ ಆಡಳಿತ ಮಂಡಳಿ ಪ್ರೋತ್ಸಾಹದಿಂದ ಮಳೆ ಕೊಯ್ಲು ಅಭಿಯಾನ ಯಶಸ್ವಿಯಾಗಿದೆ. ಆರಂಭದ ಹಂತದಲ್ಲಿ ಕೃತಕ ಇಂಗುಗುಂಡಿ ರಚನೆಯಿಂದ ನೈಸರ್ಗಿಕವಾಗಿ ಇಂಗುವ ಪ್ರಕ್ರಿಯೆಗೆ ರೂಪಾಂತರಗೊಂಡಿದೆ.
– ರಾಮಕೃಷ್ಣ ಭಟ್ ಚೊಕ್ಕಾಡಿ ಮುಖ್ಯೋಪಾಧ್ಯಾಯರು, ಧ.ಮಂ. ಪ್ರೌಢಶಾಲೆ, ಬೆಳಾಲು
– ಚೈತ್ರೇಶ್ ಇಳಂತಿಲ