Advertisement

ಸಾರಸ್‌ಗೆ ಕಾರ್ಬನ್‌ ಫೈಬರ್‌ ಬ್ರೇಕ್‌

06:22 AM Feb 22, 2019 | |

ಬೆಂಗಳೂರು: ರಾಡಾರ್‌ ತಂತ್ರಜ್ಞಾನ ಹಾಗೂ ಹೊಸ ಬಗೆಯ ನಿಯಂತ್ರಣ ಉಪಕರಣಗಳನ್ನು ಅಳವಡಿಸುವ ಮೂಲಕ 19 ಆಸನಗಳ “ಸಾರಸ್‌’ ಯುದ್ಧ ವಿಮಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನ್ಯಾಷನಲ್‌ ಏರೋನಾಟಿಕ್ಸ್‌ ಲ್ಯಾಬೋರೇಟರಿ ಪ್ರಧಾನ ನಿರ್ದೇಶಕ ಡಾ. ಶೇಖರ್‌ ಸಿ.ಮಂಡೆ ತಿಳಿಸಿದರು.

Advertisement

ಏರೋ ಇಂಡಿಯಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಸ್‌ಐಆರ್‌-ಎನ್‌ಎಎಲ್‌ನಿಂದ ನವೀಕೃತಗೊಂಡ ಸಾರಸ್‌ ವಿಮಾನ ಇದೇ ಮೊದಲ ಬಾರಿಗೆ ಹಾರಾಟ ನಡೆಸಿ ಸಾಮರ್ಥ್ಯ ಪ್ರದರ್ಶಿಸಿದೆ.

ಪ್ರಸ್ತುತ ಉಡಾನ್‌ ಯೋಜನೆಗೆ ಪೂರಕವಾಗಿ ಸಿದ್ಧಗೊಂಡಿರುವ 14 ಆಸನಗಳ ಸಾಮರ್ಥ್ಯದ ಈ ವಿಮಾನವು ರಕ್ಷಣೆ ಹಾಗೂ ನಾಗರಿಕ ವಿಮಾನಯಾನ ಎರಡರಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸಲಿದೆ. ಇನ್ನು ಮುಂದಿನ ದಿನಗಳಲ್ಲಿ 17-19 ಆಸನಗಳ ಸಾಮರ್ಥ್ಯದ ಸಾರಸ್‌ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

2018ರ ಜನವರಿಯಲ್ಲಿ ಈ ವಿಮಾನವು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿ ಯಶಸ್ವಿಯಾಗಿತ್ತು. ಬಳಿಕ ಭಾರತೀಯ ವಾಯುಸೇನೆ ಇದನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಕಳೆದ ಬಾರಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ಸಾರಸ್‌ ಅನ್ನು ಪ್ರದರ್ಶನಕ್ಕೆ ಮಾತ್ರ ಇಡಲಾಗಿತ್ತು. ಎಲ್‌ಸಿಎ-ತೇಜಸ್‌ ವಿನ್ಯಾಸದಲ್ಲೂ ಎನ್‌ಎಎಲ್‌ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದರು.

ಈಗಾಗಲೇ ಹನ್ಸಾ ನ್ಯೂಜನರೇಶನ್‌ ವಿಮಾನವನ್ನು ಎನ್‌ಎಎಲ್‌ ಸಿದ್ಧಪಡಿಸುತ್ತಿದ್ದು, 2019ರ ಸೆಪ್ಟಂಬರ್‌ ವೇಳಗೆ ಪರೀûಾರ್ಥ ಹಾರಾಟ ಮಾಡಲಿದೆೆ. 2020ರ ವೇಳೆಗೆ ಈ ವಿಮಾನಕ್ಕೆ ಡಿಜಿಸಿಎ ಪ್ರಮಾಣಪತ್ರ ಪಡೆಯುವ ಗುರಿ ಹೊಂದಲಾಗಿದೆ. ಪೈಲಟ್‌ಗಳ ತರಬೇತಿಯಲ್ಲೂ ಹನ್ಸಾ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದರು.

Advertisement

ಏರೋ ಇಂಡಿಯಾದ ಕಳೆದ ಆವೃತ್ತಿಯಲ್ಲಿ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿದ್ದ, ಸಾರಸ್‌ ಈ ಬಾರಿ ಪ್ರದರ್ಶನ ನೀಡಿತು. ಮೊದಲ ದಿನ ಬೆಳಗ್ಗೆ ತರಬೇತಿ ಹಾರಾಟ ನಡೆಸಿದ ವಿಮಾನ, ಎರಡನೇ ದಿನವಾದ ಗುರುವಾರ ಜನರ ವೀಕ್ಷಣೆಗಾಗಿ ಎರಡು ಬಾರಿ ಹಾರಾಟ ನಡೆಸಿತು.

ವಿಮಾನಗಳಿಗೆ ಕಾರ್ಬನ್‌ ಫೈಬರ್‌ ಬ್ರೇಕ್‌ ತಂತ್ರಜ್ಞಾನ: ಬೈಕ್‌ಗಳ ಡಿಸ್ಕ್ ಬ್ರೇಕ್‌ ಮಾದರಿಯಲ್ಲಿ ಹೆಲಿಕಾಪ್ಟರ್‌ನ ರೆಕ್ಕೆ ಚಲನೆಯನ್ನು ನಿಯಂತ್ರಿಸುವ ಬ್ರೇಕ್‌ ಪ್ಯಾಡ್‌ ಹಾಗೂ ಡಿಸ್ಕ್ಗೆ ಕಬ್ಬಿಣದ ಬದಲು ಕಾರ್ಬನ್‌ ಫೈಬರ್‌ ಬಳಸುವ ಹೊಸ ವಿಧಾನವನ್ನು ಎನ್‌ಎಎಲ್‌ ಆವಿಷ್ಕರಿಸಿದೆ. ಪ್ರಸ್ತುತ ಹೆಲಿಕಾಪ್ಟರ್‌ ಚಲಿಸುವಾಗ ವೇಗವನ್ನು ನಿಯಂತ್ರಿಸಲು ಕಬ್ಬಿಣದಿಂದ ತಯಾರಿಸಿದ ವೃತ್ತಾಕಾರದ ತಟ್ಟೆ ಇದೆ.

ಇವುಗಳಲ್ಲಿ ಬೇಗನೆ ಬಿಸಿಯಾಗುವ, ತುಕ್ಕು ಹಿಡಿಯುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಕಾರ್ಬನ್‌ ಫೈಬರ್‌ನಿಂದ ಈ ತಟ್ಟೆ ತಯಾರಿಸಲಾಗಿದೆ. ಈಗಾಗಲೇ ಎಚ್‌ಎಎಲ್‌ ತಯಾರಿಸುತ್ತಿರುವ ಹೆಲಿಕಾಪ್ಟರ್‌ಗಳಿಗೆ ಈ ರೀತಿಯ ಕಾರ್ಬನ್‌ ಫೈಬರ್‌ ತಟ್ಟೆ ಅಳವಡಿಸಲು ಮಾತುಕತೆ ನಡೆದಿದೆ ಎಂದು ಎನ್‌ಎಎನ್‌ ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next