ಬಾಗಲಕೋಟೆ: ಜಲಸಂಪನ್ಮೂಲ ಇಲಾಖೆಯ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲರ ಮಧ್ಯೆ ನಡೆಯುತ್ತಿರುವ ವಾಕ್ಸಮರಕ್ಕೆ ಕೆಲವರು ಜಾತಿಯ ಬಣ್ಣ ಬಳಿದು, ಸಮಾಜದಲ್ಲಿ ಸಾಮರಸ್ಯ ಕೆಡಿಸುತ್ತಿದ್ದಾರೆ. ಇಂತಹ ಸಾಮರಸ್ಯ ಕೆಡಿಸುವ ಕೆಲಸ ಯಾರೂ ಮಾಡಬಾರದು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಹೇಳಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಬಿ. ಪಾಟೀಲರು, ಜಲ ಸಂಪನ್ಮೂಲ ಇಲಾಖೆಗೆ ಸಂಬಂ ಧಿಸಿದಂತೆ ಸಚಿವ ಗೋವಿಂದ ಕಾರಜೋಳರ ಬಗ್ಗೆ ರಾಜಕೀಯವಾಗಿ ಟೀಕೆ ಮಾಡಿದ್ದಾರೆ. ಅದನ್ನು ರಾಜಕೀಯವಾಗಿಯೇ ಎದುರಿಸಬೇಕು. ಆದರೆ, ಅದಕ್ಕೆ ಜಾತಿಯ ಬಣ್ಣಹಚ್ಚಿ, ಎಂ.ಬಿ. ಪಾಟೀಲರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಪಾಟೀಲರನ್ನು ನಿಂದಿಸಲಾಗಿದೆ.
ಇದು ಖಂಡನೀಯ ಎಂದರು. ಕಾರಜೋಳರು ಶರಣ ಸಂಸ್ಕೃತಿಯಲ್ಲಿ ಬೆಳೆದು ಬಂದಿದ್ದಾರೆ. ಅವರ ಬಗ್ಗೆ ನಮಗೂ ಗೌರವವಿದೆ. ಎಂ.ಬಿ. ಪಾಟೀಲರು ಕೂಡ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನೀರಾವರಿ ಸಚಿವರಾಗಿದ್ದಾಗ ಬರಡು ಭೂಮಿಗೆ ನೀರು ಕಲ್ಪಿಸಿ ಭಗೀರಥರಾಗಿದ್ದಾರೆ. ರಾಜಕೀಯ ಟೀಕೆ-ಆರೋಪ-ಪ್ರತ್ಯಾರೋಪ ಬಂದಾಗ ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು. ಅದನ್ನು ಬಿಟ್ಟು, ಜಾತಿಯ ಬಣ್ಣಹಚ್ಚಿ, ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಕಾರಜೋಳರ ಬಗ್ಗೆ ಎಂ.ಬಿ. ಪಾಟೀಲರು ಬಳಸಿದ ಕೆಲವು ಪದಗಳನ್ನು ನಾವು ಒಪ್ಪುವುದಿಲ್ಲ. ಅವರ ಮನೆಯ ಎದುರು ಪ್ರತಿಭಟನೆ ಹಾಗೂ ಪದ ಬಳಕೆ ಮಾಡಿರುವುದನ್ನು ಒಪ್ಪುವುದಿಲ್ಲ. ಇಬ್ಬರೂ ದೊಡ್ಡ ನಾಯಕರು.
ಅವರ ರಾಜಕೀಯ ವಾಕ್ಸಮರ, ರಾಜಕೀಯವಾಗಿಯೇ ಇರಲಿ ಎಂದರು. ಜಿಲ್ಲೆಯಾದ್ಯಂತ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಶೇ.70ರಷ್ಟು ಪೂರ್ಣಗೊಂಡಿದ್ದು, ಬೂತ್ ಹಾಗೂ ತಾಲೂಕು ಮಟ್ಟದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಆನ್‌ಲೈನ್ ಮೂಲಕವೂ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ದೇಶ ವಿರೋಧಿ ಹೇಳಿಕೆ ನೀಡಿರುವ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ಅವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ನಾಗರಾಜ ಹದ್ಲಿ ಒತ್ತಾಯಿಸಿದರು.
ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಬಾಗಲಕೋಟೆ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್. ರಾಂಪುರ, ಮುಖಂಡರಾದ ಸಂಗಮೇಶ ದೊಡಮನಿ, ಎನ್.ಜಿ. ಕೋಟಿ, ಗಿರೀಶ ಹೆಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು