ಮುಂಬೈ: ಅಲ್ಲಿ ಹಳೆಯ ಬಾವಿಯೊಂದನ್ನು ಕಾಂಕ್ರೀಟ್ ಹಾಕಿ ಮುಚ್ಚಿ ಪಾರ್ಕಿಂಗ್ ಜಾಗ ನಿರ್ಮಿಸಲಾಗಿತ್ತು. ಇದೀಗ ಆ ಜಾಗ ಭಾರೀ ವೈರಲ್ ಆಗಿದೆ. ಕಾರಣ, ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಂಕ್ರೀಟ್ ಕಿತ್ತು ಹೋಗಿದ್ದು, ಅಲ್ಲಿ ನಿಲ್ಲಿಸಿದ್ದ ಕಾರು ಬಾವಿಯೊಳಗೆ ಬಿದ್ದಿದೆ.
ಇದೆಲ್ಲಾ ನಡೆದಿದ್ದು, ಮುಂಬೈನ ಘಾಟ್ ಕೋಪರ್ ನಲ್ಲಿ. ಕಾರು ನೀರಿನಲ್ಲಿ ತೇಲಾಡುವ ವಿಡಿಯೋ ಇದೀಗ ವೈರಲ್ ಆಗಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ 67 ವರ್ಷದ ಕಿರಣ್ ದೋಶಿ ಈ ಕಾರಿನ ಮಾಲಕ. ಅವರು ಕಾರಿನ್ನು ಆ ಜಾಗದಲ್ಲಿ ಪಾರ್ಕ್ ಮಾಡಿದ್ದರು. ಆದರೆ ಮಳೆಯ ಕಾರಣದಿಂದ ಕಾಂಕ್ರೀಟ್ ಕಿತ್ತು ಹೋಗಿ, ಒಳಗಿದ್ದ ಬಾವಿಗೆ ಕಾರು ಬಿದ್ದಿದೆ. ಕಿರಣ್ ದೋಶಿ ಅವರ ಅದರ ವಿಡಿಯೋ ಮಾಡಿದ್ದು, ಅದು ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ನಿಯಮ ಸಡಿಲಾವಾಗುತ್ತಿದ್ದಂತೆ ಪ್ರವಾಸಿಗರ ದೌಡು: ಶಿಮ್ಲಾದಲ್ಲಿ ಭಾರೀ ಟ್ರಾಫಿಕ್ ಜಾಮ್!
ನಗರಪಾಲಿಕೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಟ್ರಾಫಿಕ್ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಸೇರಿ ಕಾರನ್ನು ಹೊರತೆಗೆದಿದ್ದಾರೆ. ಬಾವಿಯಲ್ಲಿದ್ದ ನೀರನ್ನು ಮೋಟಾರ್ ಪಂಪ್ ನ ಮೂಲಕ ಹೊರತೆಗೆದರು. ನಂತರ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಯಿತು.
ನಗರಪಾಲಿಕೆಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಇದು ಖಾಸಗಿ ಜಾಗದಲ್ಲಿ ನಡೆದ ಘಟನೆ ಎಂದು ಮುಂಬೈ ನಗರ ಪಾಲಿಕೆ ಹೇಳಿಕೆ ನೀಡಿದೆ. ಒಟ್ಟಿನಲ್ಲಿ ಮಳೆಯ ನೀರಿನ ಕಾರಣದಿಂದ ಹಳೆಯ ಬಾವಿಯ ಜೊತೆಗೆ ಕಟ್ಟಡ ಮಾಲಕರ ಹಣ ಉಳಿಸುವ ಬುದ್ದಿಯೂ ಜಗಜ್ಜಾಹೀರಾಗಿದೆ.