Advertisement

‘ಕಾರು ಮಾರಾಟಕ್ಕಿದೆ’ಜಾಹೀರಾತಿಗೆ ಮರುಳಾಗಬೇಡಿ

03:15 AM Jul 03, 2018 | Team Udayavani |

ವಿಶೇಷ ವರದಿ – ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರು ಮಾರಾಟಕ್ಕಿದೆ ಎಂಬುದಾಗಿ ಆನ್‌ ಲೈನ್‌ ನಲ್ಲಿ ಪ್ರಕಟಿಸಿ ಸಾರ್ವಜನಿಕರು ಅದಕ್ಕೆ ಪ್ರತಿಕ್ರಿಯಿಸಿದಾಗ ಕಾರು ಮತ್ತು ಆರ್‌.ಸಿ. ದಾಖಲೆಯನ್ನು ಆನ್‌ ಲೈನ್‌ ನಲ್ಲೇ ತೋರಿಸಿ ಮುಂಗಡ ಹಣ ಪಡೆದು ವಂಚಿಸುವ ಜಾಲವೊಂದು ಕಳೆದ ಸುಮಾರು ಎಂಟು ತಿಂಗಳುಗಳಿಂದ ಸಕ್ರಿಯವಾಗಿದೆ. ಹಲವರು ಈ ಮೋಸದಾಟಕ್ಕೆ ಬಲಿಯಾಗಿದ್ದಾರೆ. ಹಣ ಪಾವತಿಸಿ, ಮಾರಾಟಕ್ಕೆ ಇರಿಸಿದ್ದೆನ್ನಲಾದ ಕಾರನ್ನು ಪರಿಶೀಲಿಸಲು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿ ಕಾರು ಇಲ್ಲದೆ ಬರಿಗೈಯಲ್ಲಿ ವಾಪಸಾಗಿದ್ದಾರೆ. ಆದರೆ ಹೀಗೆ ವಂಚನೆಗೊಂಡವರು ಮರ್ಯಾದೆಗೆ ಅಂಜಿ ಪೊಲೀಸ್‌ ದೂರು ನೀಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ.

Advertisement

ಮೋಸ ಹೀಗೆ ನಡೆಯುತ್ತಿದೆ
ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟಕ್ಕೆ ಸಂಬಂಧಿಸಿದ ಜನಪ್ರಿಯ ವೆಬ್‌ಸೈಟ್‌ ವೊಂದಕ್ಕೆ ಹೋದರೆ ಅಲ್ಲಿ ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರು ಮಾರಾಟಕ್ಕಿದೆ’ ಎಂಬ ಜಾಹೀರಾತು ಇರುತ್ತದೆ. ಕ್ಲಿಕ್‌ ಮಾಡಿದಾಗ ಬೆಲೆ ಕಾಣಿಸುತ್ತದೆ. ವಿವರಗಳಿಗೆ ಸಂಪರ್ಕಿಸಲು ಫೋನ್‌ ನಂಬರ್‌ ಬರುತ್ತದೆ. ಸಂಪರ್ಕಿಸಿದಾಗ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿ ಮುಂಗಡ ಹಣ 20,000 ರೂ.ಗಳಿಂದ 40,000 ರೂ. ವರೆಗೆ ಪಾವತಿಸುವಂತೆ ಸೂಚನೆ ಬರುತ್ತದೆ. ಬಳಿಕ ಕಾರು ನೋಡಬೇಕಿದ್ದರೆ ಮಂಗಳೂರು ವಿಮಾನ ನಿಲ್ದಾಣದ ವಾಹನ ಪಾರ್ಕಿಂಗ್‌ ಸ್ಥಳಕ್ಕೆ ಹೋಗಿ ನೋಡಬಹುದು. ಕೀ ವಿಮಾನ ನಿಲ್ದಾಣದ ಸೆಕ್ಯುರಿಟಿ ಗಾರ್ಡ್‌ ಬಳಿಯಿದೆ ಎಂದು ತಿಳಿಸಿ ಆ ಗಾರ್ಡ್‌ನ ಫೋಟೋವನ್ನು ವಾಟ್ಸಪ್‌ ಮೂಲಕ ಕಳುಹಿಸುತ್ತಾರೆ. ಇದನ್ನು ನಿಜ ಎಂದು ನಂಬುವ ಗ್ರಾಹಕರು ಬ್ಯಾಂಕ್‌ ಖಾತೆಗೆ ಹಣ ಹಾಕುತ್ತಾರೆ. ಬಳಿಕ ಕಾರು ನೋಡಲು ಹೋದರೆ ಅಲ್ಲಿ ಮಾರಾಟಕ್ಕಿರಿಸಿದ ಕಾರು ಇರುವುದಿಲ್ಲ ಹಾಗೂ ವಾಟ್ಸಪ್‌ ನಲ್ಲಿ ಕಳುಹಿಸಿದ‌ ಚಿತ್ರದಲ್ಲಿರುವ ಸೆಕ್ಯುರಿಟಿ ಗಾರ್ಡ್‌ ಕೂಡ ಇರುವುದಿಲ್ಲ. ಬಳಿಕ ವಂಚನೆ ಅರಿತು ತಮಗೆ ಬಂದ ವಾಟ್ಸಪ್‌ ಮೊಬೈಲ್‌ ಫೋನ್‌ ನಂಬರ್‌ಗೆ ಕರೆ ಮಾಡಿದರೆ ಸ್ವಿಚ್‌ ಆಫ್‌ ಆಗಿರುತ್ತದೆ.

ಈ ರೀತಿ ಮೋಸ ಹೋದ ಹಲವಾರು ಮಂದಿ ಇತ್ತೀಚೆಗೆ ಕಾವೂರು ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅಧಿಕೃತವಾಗಿ ದೂರು ನೀಡಲು ಯಾರೊಬ್ಬರೂ ಕೂಡ ಮುಂದಾಗುತ್ತಿಲ್ಲ. ಮಂಗಳೂರಿನ ಕೊಣಾಜೆ ಪರಿಸರದ ಮತ್ತು ಉತ್ತರ ಕನ್ನಡ ಜಿಲ್ಲೆಯ ಅನೇಕ ಮಂದಿ ಈ ರೀತಿ ಮೋಸ ಹೋಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಇನ್ನೊಂದು ಬಗೆಯ ವಂಚನೆ
ಮೆಡಿಕಲ್‌ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೋಗುವಾಗ ಬಿಟ್ಟು ಹೋದ ಕಾರು ಇದೆ, ಕಡಿಮೆ ಬೆಲೆ; ಕಸ್ಟಮ್ಸ್‌ ಅಧಿಕಾರಿಗಳು ಬಿಟ್ಟು ಹೋದ ಕಾರು ಇದೆ, ಕಸ್ಟಮ್ಸ್‌ ಡ್ಯೂಟಿ ಪಾವತಿಸಿದರೆ ಸಾಕು ಎಂದು ನಂಬಿಸಿ ಮುಂಗಡ ಹಣ ಪಡೆದು ವಂಚಿಸುವ ಖದೀಮರೂ ಇದ್ದಾರೆ. ವಿಮಾನ ನಿಲ್ದಾಣದಲ್ಲಿ ಎಚ್‌.ಆರ್‌.ಉದ್ಯೋಗಾವಕಾಶವಿದೆ ಎಂದು ನಂಬಿಸಿ ಮೋಸ ಮಾಡುವ ಜಾಲವೂ ಇದೆ. ಇತ್ತೀಚೆಗೆ ಆಂಧ್ರದ ಮಹಿಳೆಯೊ ಬ್ಬರು ಇಂತಹ ವಂಚನೆಗೆ ಒಳಗಾಗಿ 4 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಮಹಿಳೆಗೆ ವಿಮಾನಯಾನ ಸಂಸ್ಥೆಯೊಂದರ ನಕಲಿ ನೇಮಕಾತಿ ಪತ್ರವನ್ನೂ ಆರೋಪಿಗಳು ಕಳುಹಿಸಿದ್ದರು. ಮಂಗಳೂರು ವಿಮಾನ ನಿಲ್ದಾಣದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ವಂಚನೆಗೆ ಜನರು ಬಲಿಯಾಗುವುದು ಬೇಡ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಬಳಸಿದ ಕಾರು ಖರೀದಿ ಸಂದರ್ಭದಲ್ಲಿ ಮಾರಾಟಕ್ಕಿಟ್ಟಿರುವ ಕಾರಿನ ಅಸಲಿ ದಾಖಲೆಪತ್ರಗಳು ಮತ್ತು ಅಸಲಿ ಮಾಲಕರು ಎಂಬುದು ಖಚಿತವಾದಲ್ಲಿ ಮಾತ್ರ ಕಾರು ಖರೀದಿಸಲು ಮುಂದಾಗಬೇಕು. ನಕಲಿ ದಾಖಲೆಪತ್ರಗಳಿಗೆ ಮಾರುಹೋಗಿ ಹಣ ಪಾವತಿಸಿ ಮೋಸ ಹೋಗದಿರಿ. ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ನಿರ್ದಿಷ್ಟವಾಗಿ ದೂರು ನೀಡಿದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
– ಟಿ.ಆರ್‌. ಸುರೇಶ್‌, ಪೊಲೀಸ್‌ ಕಮಿಷನರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next