Advertisement

Bangalore: ಆಟವಾಡುತ್ತಿದ್ದ ಮಗು ಮೇಲೆ ಹರಿದ ಕಾರು!

12:34 PM Dec 17, 2023 | Team Udayavani |

ಬೆಂಗಳೂರು: ಟೆಕಿಯೊಬ್ಬರು ಅಪಾರ್ಟ್‌ಮೆಂಟ್‌ ಗೇಟ್‌ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿದ ಪರಿಣಾಮ ಮಗು ಮೃತಪಟ್ಟಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ನೇಪಾಳ ಮೂಲದ ಜೋಗ್‌ ಜಾತರ್‌ ಹಾಗೂ ಅನಿತಾ ದಂಪತಿ ಪುತ್ರಿ ಅರ್ಬಿನಾ(3) ಮೃತ ಮಗು.

ಬೆಳ್ಳಂದೂರಿನ ಕಸವನಹಳ್ಳಿಯ ಓನರ್ಸ್‌ ಕೋರ್ಟ್‌ ಪೂರ್ವದಲ್ಲಿರುವ ಸಮೃದ್ಧಿ ಅಪಾರ್ಟ್ ಮೆಂಟ್‌ನಲ್ಲಿ ಡಿ.10ರಂದು ಘಟನೆ ನಡೆದಿದ್ದು, ಈ ಸಂಬಂಧ ಮಗುವಿನ ತಂದೆ ಜೋಗ್‌ ಜಾತಾರ್‌ ಎಂಬವರು, ಕೃತ್ಯ ಎಸಗಿದ ಟೆಕಿ ಸುಮನ್‌ ಸಿ.ಕೇಶವದಾಸ್‌ ಎಂಬಾತನ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‌

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಆರೋಪಿ ಸುಮನ್‌ ಸಿ.ಕೇಶವದಾಸ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೋರ್ಟ್‌ ಅನುಮತಿ ಪಡೆದು ಪ್ರಕರಣವನ್ನು ಬೆಳ್ಳಂದೂರು ಸಂಚಾರ ಠಾಣೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮಗು ಗಮನಿಸದ ಚಾಲಕ: ನೇಪಾಳ ಮೂಲದ ಜೋಗ್‌ ಜಾತರ್‌ ಸಮೃದ್ಧಿ ಅಪಾರ್ಟ್‌ಮೆಂಟ್‌ ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದಾರೆ. ಹೀಗಾಗಿ ದಂಪತಿ ಮಕ್ಕಳ ಜತೆ ಅಪಾರ್ಟ್‌ಮೆಂಟ್‌ನ ಕೋಣೆಯೊಂದರಲ್ಲಿ ವಾಸವಾಗಿದ್ದಾರೆ. ಡಿ.10ರಂದು ಬೆಳಗ್ಗೆ 7 ಗಂಟೆಗೆ ಮೂರು ವರ್ಷದ ಅರ್ಬಿನಾ ಆಟವಾಡುತ್ತಾ ಅಪಾರ್ಟ್‌ಮೆಂಟ್‌ನ ಗೇಟ್‌ ಮುಂಭಾಗದ ಪಾದಚಾರಿ ಮಾರ್ಗಕ್ಕೆ ಬಂದಿದ್ದಾಳೆ. ಅದೇ ವೇಳೆ ಸುಮನ್‌ ಕಾರು ಅಪಾರ್ಟ್‌ಮೆಂಟ್‌ ಒಳಭಾಗಕ್ಕೆ ಬಂದಿದ್ದು, ಏಕಾಏಕಿ ಮಗುವಿನ ಮೇಲೆ ಹರಿದಿದೆ. ಅದನ್ನು ಗಮನಿಸದೆ ಕಾರು ಚಾಲಕ ಮುಂದೆ ಹೋಗಿದ್ದಾನೆ.

Advertisement

ಆಸ್ಪತ್ರೆ ರವಾನೆ: ಕಾರಿಗೆ ಸಿಲುಕಿದ ಅರ್ಬಿತಾ, ಎದ್ದೇಳಲು ಸಾಧ್ಯವಾಗದೆ ಜೋರಾಗಿ ಅಳಲು ಆರಂಭಿಸಿದ್ದಾಳೆ. ಆಗ ಮತ್ತೊಂದು ಮಗು ಬಂದು ಆಕೆಯನ್ನು ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೆಲ ಹೊತ್ತಿನ ಬಳಿಕ ಅರ್ಬಿತಾ ತಂದೆ ಸ್ಥಳಕ್ಕೆ ಆಗಮಿಸಿ ಮೇಲಕ್ಕೆ ಎತ್ತಿಕೊಂಡಾಗಲೂ ಅಳುತ್ತಿದ್ದಳು. ಬಳಿಕ ಆಕೆಯನ್ನು ಪರಿಶೀಲಿಸಿದಾಗ ಆಕೆಯ ಬಲಗೈ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯಗಳಾಗಿತ್ತು. ಗೇಟ್‌ನ ಕಬ್ಬಿಣದ ರಾಡ್‌ ತಗುಲಿ ಗಾಯಗೊಂಡಿರಬಹುದು ಎಂದು ಭಾವಿಸಿದ ಪೋಷಕರು, ಕೂಡಲೇ ಸರ್ಜಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಪರೀಕ್ಷಿಸಿದ್ದ ವೈದ್ಯರು ಮಗುವಿನ ಬಲಗೈ ಭುಜ ಮುರಿದಿದ್ದು ಮತ್ತೂಂದು ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಎಕ್ಸ್‌ರೇ, ಸ್ಕ್ಯಾನಿಂಗ್‌ ಪರೀಕ್ಷೆಗಳಿಗೆ 30 ಸಾವಿರ ವೆಚ್ಚವಾಗಲಿದೆ ಎಂದಿದ್ದಾರೆ. ಅಷ್ಟೊಂದು ಹಣ ತಮ್ಮ ಬಳಿ ಇಲ್ಲ ಎಂದಾಗ, ಮಗುವನ್ನು ಸಂಜಯ್‌ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಯೂ ಚಿಕಿತ್ಸೆ ಸಾಧ್ಯವಿಲ್ಲ ಎಂದಾಗ ನಿಮ್ಹಾನ್ಸ್‌ಗೆ ಕರೆದೊಯ್ದರು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಸಿ ಕ್ಯಾಮೆರಾದಲ್ಲಿ ಭೀಕರ ದೃಶ್ಯ: ಘಟನೆ ಬಗ್ಗೆ ಅರ್ಬಿತಾ ಪೋಷಕರು ಬೆಳ್ಳಂದೂರು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಆದರೆ, ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಮಗುವಿನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿದೆ ಎಂದು ವರದಿ ನೀಡಿದ್ದರು. ಹೀಗಾಗಿ ಈ ಸಾವಿನ ಬಗ್ಗೆ ಅನುಮಾನವಿದೆ ಎಂದು, ಅಪಾರ್ಟ್‌ಮೆಂಟ್‌ ಮುಂಭಾಗದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಸುಮನ್‌ ಸಿ. ಕೇಶವದಾಸ್‌ನ ಕಾರು ಅರ್ಬಿತಾ ಮೇಲೆ ಹರಿದು ಹೋಗಿರುವುದು ಪತ್ತೆಯಾಗಿತ್ತು. ಈ ದೃಶ್ಯ ಆಧರಿಸಿ ಜೋಗ್‌ ಜಾತಾರ್‌ ನೀಡಿದ ದೂರಿನ ಅನ್ವಯ ಸುಮನ್‌ ಸಿ.ಕೇಶವದಾಸ್‌ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಆರೋಪಿ ಸುಮನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಾರು ಚಾಲನೆ ವೇಳೆ ಮಗು ಕಾಣಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next