Advertisement

ಕಾರಿಗೊಂದು ಸೂರು!

10:13 AM Jan 07, 2020 | mahesh |

ನಮ್ಮ ಅಚ್ಚುಮೆಚ್ಚಿನ ವಾಹನ ಸುರಕ್ಷಿತ ಸ್ಥಳದಲ್ಲಿ ಇದೆ, ನಾಳೆ ಬೆಳಗ್ಗೆ ಅವಸರದಲ್ಲಿ ಕೆಲಸಕ್ಕೆ ಹೊರಡಬೇಕಾದರೆ, ಸುಸ್ಥಿತಿಯಲ್ಲಿ ಇರುತ್ತದೆ ಎಂಬ ಖಾತರಿ ರಾತ್ರಿ ಸುಖ ನಿದ್ರೆಗೆ ಕಾರಣವಾಗುತ್ತದೆ. ಇಂಥ ಅನೇಕ ಕಾರಣಗಳಿಗಾಗಿ ಪಾರ್ಕಿಂಗ್‌ ಜಾಗ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

Advertisement

ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆ ದೊಡ್ಡ ಸಮಸ್ಯೆ ಆಗುತ್ತಿದೆ. ಹೊಸ ವಾಹನ ಕೊಳ್ಳುವವರ ಬಳಿ ಅದನ್ನು ನಿಲ್ಲಿಸುವ ಸ್ಥಳ ಕಡ್ಡಾಯವಾಗಿ ಇರಬೇಕು. ಇಲ್ಲದಿದ್ದರೆ ಪರವಾನಗಿ ನೀಡುವುದಿಲ್ಲ ಎಂಬುದು ಸುದ್ದಿಯೂ ಆಗಿತ್ತು. ಅಡ್ಡಾದಿಡ್ಡಿಯಾಗಿ ಬೆಳೆದಿರುವ ಬೃಹತ್‌ ನಗರಗಳಲ್ಲಿ ಬಹುತೇಕ ರಸ್ತೆಗಳ ಅಗಲ ತೀರ ಕಡಿಮೆ ಇದೆ. ಅದರ ಒಂದು ಬದಿಯಲ್ಲಿ ಸಣ್ಣ ಕಾರುಗಳನ್ನು ನಿಲ್ಲಿಸಿದರೂ ಇತರೆ ವಾಹನಗಳಿಗೆ ಓಡಾಡಲು ಕಷ್ಟ ಆಗುತ್ತದೆ. ವಾಹನ ನಿಲ್ಲಿಸಲು ಹೇಗಿದ್ದರೂ ರಸ್ತೆ ಇದೆಯಲ್ಲಾ! ಎಂದು ಬಹುತೇಕ ಮನೆ ಮಾಲೀಕರು ಕಾರ್‌ ಪಾರ್ಕಿಂಗ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಜೊತೆಗೆ, ಕಾರುಗಳ ಬೆಲೆ ಒಂದು ಲಕ್ಷ ರೂಪಾಯಿ ಇದ್ದಾಗ, ಗ್ಯಾರೇಜ್‌ ಕಟ್ಟಲು 10,000 ರೂ. ಸಾಕಾಗುತ್ತಿತ್ತು ಹಾಗೂ ನಿವೇಶನಗಳೂ ದೊಡ್ಡದಿರುತ್ತಿದ್ದವು. ಆದರೆ ಈಗ ಕಾರಿನ ಬೆಲೆ ಎರಡು ಲಕ್ಷ ರೂ. ಇದ್ದರೆ, ಅದಕ್ಕೆ ಗ್ಯಾರೇಜ್‌ ಕಟ್ಟಲು ಮೂರು ಲಕ್ಷ ಬೇಕಾಗುತ್ತದೆ! ಆದುದರಿಂದ, ಹೇಗಿದ್ದರೂ ವಾಹನಗಳಿಗೆ ಇನ್ಶೂರನ್ಸ್‌ ಇದೆಯಲ್ಲ, ಹೋದರೆ ಮತ್ತೂಂದು ಬರುತ್ತದೆ ಎಂದು ಯೋಚಿಸುವವರೂ ಇದ್ದಾರೆ. ಆದರೆ, ನಮ್ಮ ಅಚ್ಚುಮೆಚ್ಚಿನ ವಾಹನ ಸುರಕ್ಷಿತ ಸ್ಥಳದಲ್ಲಿ ಇದೆ, ನಾಳೆ ಬೆಳಗ್ಗೆ ಅವಸರದಲ್ಲಿ ಕೆಲಸಕ್ಕೆ ಮತ್ತೂಂದಕ್ಕೆ ಹೊರಡಬೇಕಾದರೆ, ಸುಸ್ಥಿತಿಯಲ್ಲಿ ಇರುತ್ತದೆ ಎಂಬ ಖಾತರಿ, ರಾತ್ರಿ ಸುಖ ನಿದ್ರೆಗೆ ಕಾರಣವಾಗುತ್ತದೆ. ಇನ್ನು ಕಾನೂನು ಬಂದರಂತೂ, ಕಡ್ಡಾಯವಾಗಿ ನಮ್ಮ ನಿವೇಶನದಲ್ಲೇ ಕಾರ್‌ ಪಾರ್ಕಿಂಗ್‌ ಮಾಡಬೇಕಾಗುತ್ತದೆ.

ಕಾರ್‌ ಪಾರ್ಕಿಂಗ್‌ ಎಂದರೆ…
ಯಾವುದೇ ವಾಹನಗಳನ್ನು ನಿಲ್ಲಿಸುವ ಜಾಗಕ್ಕೆ ವಾಡಿಕೆಯಲ್ಲಿ ಪಾರ್ಕಿಂಗ್‌ ಅಥವಾ ಕಾರ್‌ ಪಾರ್ಕಿಂಗ್‌ ಎಂದು ಹೇಳುತ್ತಾರೆ. ಈ ಸ್ಥಳದಲ್ಲಿ ಕಾರನ್ನು ಮಾತ್ರ ನಿಲ್ಲಿಸಬೇಕು ಎಂದೇನೂ ಇಲ್ಲ. ಒಂದು ಕಾರ್‌ ಪಾರ್ಕಿಂಗ್‌ ಸ್ಥಳದಲ್ಲಿ ನಾಲ್ಕಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಈಗ ನಿಮ್ಮ ಬಳಿ ಕಾರ್‌ ಇಲ್ಲದಿದ್ದರೂ ಮುಂದೆ ತೆಗೆದುಕೊಂಡಾಗ ಹೊಸದಾಗಿ ನಿರ್ಮಿಸಲು ಸಾಧ್ಯವಾಗದೆ ಇರಬಹುದು. ಈಗ ವಾಹನ ನಿಲುಗಡೆಗೆ ಸುರಕ್ಷಿತ ಸ್ಥಳಗಳು ಎಷ್ಟು ಕಡಿಮೆ ಇದೆ ಎಂದರೆ, ಕಾರು ಇರುವವರು ನಿಮ್ಮ ತೆರೆದ ಸ್ಥಳವನ್ನು ಬಾಡಿಗೆ ಕೊಟ್ಟು ತೆಗೆದುಕೊಳ್ಳುವುದನ್ನೂ ಎದುರುನೋಡಬಹುದು. ಮನೆಯಲ್ಲಿ ಹುಟ್ಟುಹಬ್ಬ, ಉಪನಯನ ಏನೇ ಕಾರ್ಯಕ್ರಮಗಳಿದ್ದರೂ ವಾಹನಗಳನ್ನು ತಾತ್ಕಾಲಿಕವಾಗಿ ರಸ್ತೆಯಲ್ಲಿ ನಿಲ್ಲಿಸಿ, ಈ ಸ್ಥಳದಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು. ಮಕ್ಕಳಿಗೆ ಆಡಲು ಜಾಗ ಕಡಿಮೆ ಆಗಿ ರಸ್ತೆಯಲ್ಲೇ ಆಡುವುದನ್ನು ನೋಡಬಹುದು, ಇದು ಅನೇಕ ಅಪಘಾತಗಳಿಗೆ ಎಡೆಮಾಡಿಕೊಡುತ್ತದೆ. ಸಂಜೆಯ ವೇಳೆಯೋ, ಇಲ್ಲವೇ ರಜಾದಿನಗಳಲ್ಲಿಯೋ, ವಾಹನಗಳನ್ನು ತೆರವು ಮಾಡಿ ಮಕ್ಕಳಿಗೆ ಆಡಲು ಕೊಟ್ಟರೆ, ಅವರು ಸುರಕ್ಷಿತವಾಗಿ ನಮ್ಮ ಕಣ್ಗಾವಲಿನಲ್ಲಿ ಆಡಿಕೊಂಡಿರಬಹುದು.

ಹೆಚ್ಚು ಖರ್ಚಿಲ್ಲದೆ ಕಾರ್‌ ಪಾರ್ಕಿಂಗ್‌
ವಾಹನ ನಿಲುಗಡೆಯ ಸ್ಥಳ ತೆರೆದಂತೆ ಇದ್ದರೂ ಪರವಾಗಿಲ್ಲ, ಹಾಗೆಯೇ ಮನೆಗಳ ವಿನ್ಯಾಸವನ್ನು ಅನುಮೋದಿಸುವಾಗ ಕಾರ್ಪೊರೇಷನ್‌ನವರು ವಾಹನ ನಿಲುಗಡೆಗೆಂದೇ ಹೆಚ್ಚುವರಿ ಸ್ಥಳವನ್ನೂ ಮಂಜೂರು ಮಾಡುತ್ತಾರೆ. ಹಾಗಾಗಿ, ನಾವು ವಾಹನ ನಿಲುಗಡೆಗೆ ಸ್ಥಳ ಕೊಟ್ಟರೆ ಮನೆ ಚಿಕ್ಕದಾಗುತ್ತದೆ ಎಂದು ಯೋಚಿಸುವ ಅಗತ್ಯ ಇಲ್ಲ! ಈ ಹಿಂದಿನಂತೆ ಕಾರಿನಿಂದ ಸಣ್ಣಪುಟ್ಟ ಬಿಡಿಭಾಗಗಳನ್ನು ಕದ್ದು ಒಯ್ಯುವ ಅಭ್ಯಾಸವೂ ಕಳ್ಳಕಾಕರಲ್ಲಿ ಕಡಿಮೆ ಆಗಿದೆ. ಅವರೇನಿದ್ದರೂ ಇಡೀ ವಾಹನವನ್ನೇ ಚಲಾಯಿಸಿಕೊಂಡು ಹೋಗುತ್ತಾರೆ. ಆದುದರಿಂದ, ನಿವೇಶನದಲ್ಲಿ ತೆರೆದ ಸ್ಥಳವನ್ನು ಮಾಡಿಕೊಂಡು, ಅಲ್ಲಿ ಕಾರನ್ನು ನಿಲ್ಲಿಸಿ, ಗೇಟಿಗೆ ಬೀಗ ಹಾಕಿದರೆ ಸಾಕು. ನಮ್ಮ ವಾಹನ ಸುರಕ್ಷಿತವಾಗಿರುತ್ತದೆ. ಇನ್ನು, ರಸ್ತೆ ಬದಿಯಲ್ಲಿ ದುಬಾರಿ ಕಾರುಗಳನ್ನು ನಿಲ್ಲಿಸಿದರೆ, ತುಂಟ ಹುಡುಗರು ಗಾಜಿನ ಮೇಲೆ ಬರೆಯುವುದು, ಬಣ್ಣ ಸುಂದರವಾಗಿದ್ದರೆ ಅದರ ಮೇಲೆ ಗೀರುವುದು ಇತ್ಯಾದಿ ಮಾಡಬಹುದು. ರಸ್ತೆಯಲ್ಲಿ ಹೋಗುವವರ ಕಣ್ಣಿಗೆ ಅಪ್ಪಿತಪ್ಪಿ ಕಾರಿನ ಒಳಗೆ ಫೋನ್‌, ಲ್ಯಾಪ್‌ಟಾಪ್‌ ಮುಂತಾದ ದುಬಾರಿ ವಸ್ತುಗಳು ಇರುವುದು ಕಂಡರೆ ಗಾಜು ಒಡೆದಾದರೂ ಅದನ್ನು ಲಪಟಾಯಿಸಲು ಪ್ರಯತ್ನಿಸಬಹುದು. ಈ ಎಲ್ಲದರ ನಷ್ಟಕ್ಕೆ ಹೋಲಿಸಿದರೆ, ನಮ್ಮ ಮನೆಯಲ್ಲಿ ಒಂದು ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದೇ ಅಗ್ಗ ಎಂದು ತೋರುತ್ತದೆ!

ಇಕ್ಕಟ್ಟಾಗಿ ಇರದಿರಲಿ
ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವ ತರಾತುರಿಯಿದ್ದರೆ, ಸಂಜೆ ಅಥವಾ ತಡರಾತ್ರಿ ಮನೆಗೆ ಬಂದಾಗ ಸುಸ್ತಾಗಿದ್ದು, ಸ್ಥಳ ತೀರಾ ಚಿಕ್ಕದಿದ್ದರೆ, ವಾಹನವನ್ನು ಸರಿಯಾಗಿ ನಿಲ್ಲಿಸುವುದೇ ದೊಡ್ಡ ಕೆಲಸವಾಗಿ ಹೋಗುತ್ತದೆ. ಅದರಲ್ಲೂ, ಮನೆಯ ಮುಂದಿನ ರಸ್ತೆ ಕಿರಿದಾಗಿದ್ದರೆ, ಕಾರನ್ನು ತಿರುಗಿಸಿ ನಿವೇಶನದ ಒಳಗೆ ನಿಲ್ಲಿಸುವುದು ಹರಸಾಹಸ ಆಗುತ್ತದೆ. ನಮ್ಮಲ್ಲಿ ಇಪ್ಪತ್ತು ಅಡಿ ಅಗಲದ ರಸ್ತೆಗಳೂ ವಿರಳವೇನಲ್ಲ, ಇಂಥ ರಸ್ತೆಗಳಲ್ಲಿ ಕಾರು ತಿರುಗಿಸಲು ಕಷ್ಟವಾಗುವುದರಿಂದ, ಮನೆಯ ಗೇಟನ್ನು ವಿಶಾಲವಾಗಿ ಇಟ್ಟುಕೊಳ್ಳಬೇಕು. ಆಗ ಒಂದೆರಡು ಬಾರಿ ಹಿಂದೆ ಮುಂದೆ ಹೋಗಿಯಾದರೂ, ನಮ್ಮ ನಿವೇಶನದಲ್ಲಿ ನಿಲ್ಲಿಸಲು ಸಾಧ್ಯ ಆಗುತ್ತದೆ. ಮಾಮೂಲಿಯಾಗಿ ಗೇಟಿನ ಅಗಲವನ್ನು ಹತ್ತು ಅಡಿ ಇಡಲಾಗುತ್ತದೆ, ಆದರೆ ರಸ್ತೆ ಅಗಲ ಕಡಿಮೆ ಇದ್ದರೆ, ಇಲ್ಲವೆ ನಿಮ್ಮ ಕಾರಿನ ಉದ್ದ ಹೆಚ್ಚಿದ್ದರೆ, ಗೇಟಿನ ಅಗಲವನ್ನು ಹನ್ನೆರಡು ಅಡಿಗಳಿಂದ ಹದಿನೈದು ಅಡಿಗಳವರೆಗೂ ಇಟ್ಟುಕೊಳ್ಳಬಹುದು.

Advertisement

ಪಾರ್ಕಿಂಗ್‌ ಲೆಕ್ಕಾಚಾರ
ಈ ಹಿಂದೆ ಕಾರ್‌ ಪಾರ್ಕಿಂಗ್‌ ಎಂದರೆ ಅದು ಹತ್ತು ಅಡಿಗೆ ಇಪ್ಪತ್ತು ಅಡಿಗಳಷ್ಟು ಇರುತ್ತಿತ್ತು. ಆಗ ಕಾರುಗಳ ಉದ್ದ ಅಗಲ ಕಡಿಮೆಯೇ ಇರುತ್ತಿತ್ತು! ಆದರೆ ಈಗ ಕಾರುಗಳ ಅಗಲ ಉದ್ದ ಹೆಚ್ಚಾಗಿದ್ದರೂ ಆದಷ್ಟೂ ಕಡಿಮೆ ಸ್ಥಳ ನೀಡಲು ನೋಡುತ್ತೇವೆ! ಸಣ್ಣ ಕಾರ್‌ ಇದ್ದರೆ, ಅದಕ್ಕೆ ಕನಿಷ್ಠ ಸುಮಾರು ಹನ್ನೆರಡು ಅಡಿ ಉದ್ದ, ಎಂಟು ಅಡಿಯಷ್ಟಾದರೂ ಅಗಲದ ಸ್ಥಳ ಇರಬೇಕಾಗುತ್ತದೆ. ಇಲ್ಲದಿದ್ದರೆ ಕಾರಿನ ಬಾಗಿಲು ತೆಗೆದರೆ ಅಕ್ಕಪಕ್ಕದ ಗೋಡೆಗೆ ತಾಗುವ ಸಾಧ್ಯತೆ ಇರುತ್ತದೆ. ಪಾರ್ಕಿಂಗ್‌ ಮಾಡಿದ ಮೇಲೆ, ಕಾರಿಗೂ ಮನೆಗೂ ಕನಿಷ್ಠ ಒಂದೂವರೆ ಅಡಿಯಷ್ಟಾದರೂ ಅಂತರ ಇರಬೇಕು ಇರಬೇಕು, ಇಲ್ಲದಿದ್ದರೆ ಸರಿಯಾಗಿ ನಿಲ್ಲಿಸಲು ಆಗುವುದಿಲ್ಲ. ಹಾಗಾಗಿ, ನಿಮ್ಮ ಕಾರಿನ ಪಾರ್ಕಿಂಗ್‌ ಸ್ಥಳ ನಿರ್ಧರಿಸಲು ಅದರ ಉದ್ದ ಅಗಲ ಹಾಗೂ ಅದರ ಬಾಗಿಲು ತೆರೆದು ಹೊರಬರಲು ಎಷ್ಟು ಸ್ಥಳ ಬೇಕು? ಎಂಬುದನ್ನು ಅಳೆದು ನಂತರ ನಿಗದಿಪಡಿಸಬೇಕು. ಮಧ್ಯಮ ಗಾತ್ರದ “ಸೆಡಾನ್‌’ ಮಾದರಿಯ ಕಾರುಗಳು ಸುಮಾರು ಹದಿಮೂರು ಅಡಿ ಉದ್ದ ಇರುತ್ತವೆ. ಅವಕ್ಕೆ ಕನಿಷ್ಠ ಹದಿನೈದು ಅಡಿ ಉದ್ದದ ಸ್ಥಳ ಬೇಕಾಗುತ್ತದೆ. ಹಾಗೆಯೇ ನಿವೇಶನದ ಅಗಲ ನೋಡಿಕೊಂಡು, ಕಾರಿನ ಒಂದು ಕಡೆ ಒಂದು ಅಡಿಯಷ್ಟು ಖಾಲಿ ಜಾಗ ಇರುವಂತೆ ನೋಡಿಕೊಂಡು, ಮತ್ತೂಂದು ಕಡೆ ಬಾಗಿಲು ತೆರೆದು ಹೊರಬರಲು ಎಷ್ಟು ಜಾಗ ಬೇಕು ಎಂಬುದನ್ನು ಲೆಕ್ಕಹಾಕಬೇಕು. ಇದಕ್ಕೆ ಸಾಮಾನ್ಯವಾಗಿ ಒಂಬತ್ತು ಅಡಿಯಷ್ಟಾದರೂ ಇದ್ದರೆ ಧಾರಾಳವಾಗಿ ಆಗುತ್ತದೆ. ಇನ್ನು “ಲಿಮೋಸಿನ್‌’- ಸರಳವಾಗಿ ಹೇಳಬೇಕಾದರೆ “ಹಡಗಿನಂತೆ’ ತುಂಬಾ ಉದ್ದಕ್ಕಿರುವ ಕಾರು. ಅದರ ಉದ್ದವೇ ಸುಮಾರು ಹದಿನೇಳು ಅಡಿ ಇರುತ್ತದೆ. ಇಂಥ ವಾಹನಗಳಿಗೆ ಪಾರ್ಕಿಂಗ್‌ ಜಾಗದ ಉದ್ದವನ್ನು ಇಪ್ಪತ್ತು ಅಡಿಯಷ್ಟಾದರೂ ನೀಡುವುದು ಉತ್ತಮ. ಈ ಥರದ ಕಾರುಗಳು ನಮ್ಮ ದೇಶದಲ್ಲಿ ಹೆಚ್ಚಿಲ್ಲ ಎನ್ನುವುದು ಸಮಾಧಾನಕರ ಸಂಗತಿ.

ಹೆಚ್ಚಿನ ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next