ಧಾರವಾಡ: ಇಲ್ಲಿಯ ಶ್ರೀನಗರ ಕ್ರಾಸ್ ಬಳಿಯ ಕರ್ನಾಟಕ ವಿಶ್ವವಿದ್ಯಾಲಯ ಪ್ರವೇಶ ದ್ವಾರದಲ್ಲಿರುವ ರೈಲ್ವೆ ಗೇಟ್‌ನಲ್ಲಿ ರವಿವಾರ ಭಾರಿ ಅನಾಹುತವೊಂದು ತಪ್ಪಿದೆ. ಬೆಳಗ್ಗೆ ಗೂಡ್ಸ್ ರೈಲು ಬರುವಿಕೆಗಾಗಿ ಗೇಟ್ ಬಂದ್ ಮಾಡಲಾಗಿತ್ತು. ಗೂಡ್ಸ್ ವಾಹನ ತೆರಳಿದ ಬಳಿಕ ಗೇಟ್ ತೆರೆದಿದ್ದು, ಆಗ ವಾಹನಗಳು ಹಳಿಯ ಮೇಲೆ ಸಂಚರಿಸಲು ಮುಂದಾದಾಗ ರೈಲು ಎಂಜಿನ್‌ವೊಂದು ಏಕಾಏಕಿ ಬಂದಿದೆ. ಇದರಿಂದ ವಾಹನ ಚಾಲಕರು ಕಕ್ಕಾಬಿಕ್ಕಿ ಆಗಿದ್ದಾರೆ. ರೈಲು ಎಂಜಿನ್ ಬಂದಿದ್ದರಿಂದ ಗೇಟ್ ಕೀಪರ್ ಗೇಟ್ ಬಂದ್ ಮಾಡಿದ್ದು, ಅಷ್ಟರೊಳಗೆ ಕಾರೊಂದು ಹಳಿ ಮಧ್ಯೆ ಸಿಲುಕಿದೆ. ಹಳಿ ಮೇಲೆ ನಿಂತಿದ್ದ ವಾಹನ ಗಮನಿಸಿದ ರೈಲು ಎಂಜಿನ್ ಚಾಲಕ, ಕೂಡಲೇ ರೈಲು ಎಂಜಿನ್ ಬಂದ್ ಮಾಡಿ ನಿಲ್ಲಿಸಿದ್ದಾನೆ. ಆ ಬಳಿಕ ಗೇಟ್ ತೆರೆದು ಹಳಿ ಮಧ್ಯೆ ಸಿಲುಕಿದ್ದ ವಾಹನ ಹೊರಗಡೆ ತರಲಾಯಿತು. ಘಟನೆಯಿಂದ ಆಘಾತಕ್ಕೆ ಒಳಗಾದ ವಾಹನ ಸವಾರರು, ಗೇಟ್ ಕೀಪರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಮುಂದೆ ಆಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿ ಅಲ್ಲಿಂದ ತೆರಳಿದ್ದಾರೆ. ಆದರೆ ಇಲ್ಲಿ ರೈಲ್ವೆ ಗೇಟ್ ಕೀಪರ್‌ನ ತಪ್ಪಿಲ್ಲ. ರೈಲ್ವೆ ಗೇಟ್ ಹಾಕುವಷ್ಟರಲ್ಲಿಯೇ ಕಾರಿನವನು ಒಳಗಡೆ ಹೋಗಿದ್ದಾನೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.