ಕೊಚ್ಚಿನ್: ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ದಂಪತಿ ಸಾಗುತ್ತಿದ್ದ ಕಾರು ರಸ್ತೆ ಬದಿಯ ಬಾವಿಗೆ ಬಿದ್ದ ಘಟನೆ ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ನವವಿವಾಹಿತ ದಂಪತಿ ಕಾರ್ತಿಕ್ ಮತ್ತು ವಿಸ್ಮಯಾ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸುಮಾರು 15 ಅಡಿ ಆಳದ ಬಾವಿಯಲ್ಲಿ ಐದು ಅಡಿ ನೀರಿತ್ತು.
ಎರಡು ತಿಂಗಳ ಹಿಂದೆಯಷ್ಟೇ ಇವರಿಬ್ಬರ ವಿವಾಹವಾಗಿದ್ದು, ಮೂರು ದಿನಗಳ ಪೂಜೆ ರಜೆಗಳು ಆರಂಭವಾಗಿದ್ದರಿಂದ ರಾಜ್ಯ ರಾಜಧಾನಿ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್ ಮತ್ತು ಕೃಷಿ ವಿದ್ಯಾರ್ಥಿಯಾಗಿರುವ ವಿಸ್ಮಯಾ ಮನೆಗೆ ತೆರಳುತ್ತಿದ್ದರು.
ಶುಕ್ರವಾರ ತಡರಾತ್ರಿ, ದಂಪತಿಗಳು ವಿಸ್ಮಯ ಅವರ ತವರು ಕೊಟ್ಟಾರಕರದಿಂದ ಕಾರ್ತಿಕ್ ವಾಸಿಸುವ ಅಲುವಾಗೆ ಕಾರಿನಲ್ಲಿ ಹೋಗುತ್ತಿದ್ದಾಗ ಎರ್ನಾಕುಲಂನ ಕೋಲೆಂಚೇರಿ ಬಳಿ ಅಪಘಾತ ಸಂಭವಿಸಿದೆ.
“ನಾವು ಆಕೆಯ ತವರು ಪಟ್ಟಣದಿಂದ ಆಲುವಾದಲ್ಲಿ ನಮ್ಮ ಮನೆಗೆ ಹೋಗುತ್ತಿದ್ದೆವು. ನಮ್ಮ ಕಾರು ರಸ್ತೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ, ರಸ್ತೆಯಿಂದ ಹೊರಗೆ ಚಲಿಸಿತು. ರಸ್ತೆ ಬದಿಯಲ್ಲಿರುವ ಪಂಚಾಯತ್ ಬಾವಿಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. ಪಕ್ಕದ ಗೋಡೆಗಳನ್ನು ಮುರಿದು ಕಾರು ಬಾವಿಗೆ ಧುಮುಕಿತು” ಎಂದು ಕಾರ್ತಿಕ್ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಪ್ರತ್ಯಕ್ಷದರ್ಶಿ ಚಕ್ಕಪ್ಪನ್ ಎಂಬವರು ಈ ಬಗ್ಗೆ ಮಾಹಿತಿ ನೀಡಿದ್ದು, “ಸುಮಾರು 9.20ರ ಸಮಯಕ್ಕೆ ಘಟನೆ ನಡೆದಿದೆ. ಸ್ಥಳವು ಅಡ್ಡರಸ್ತೆ ಮತ್ತು ದೊಡ್ಡ ಇಳಿಜಾರಿನಲ್ಲಿದೆ.. ಯುವ ದಂಪತಿಗಳ ವಾಹನವು ರಸ್ತೆಯಲ್ಲಿ ನೀರು ತುಂಬಿದ್ದರಿಂದ ಇಳಿಜಾರು ಗುರುತಿಸಲು ಸಾಧ್ಯವಾಗದೆ ನಿಯಂತ್ರಣ ಕಳೆದುಕೊಂಡಿತು. ನಂತರ ಕಾರು ಪಕ್ಕಕ್ಕೆ ಡಿಕ್ಕಿ ಹೊಡೆದು ಮುಂದೆ ಸಾಗಿತು. ಸುಮಾರು 30 ಮೀಟರ್ ದೂರದಲ್ಲಿರುವ ಬಾವಿಯ ಗೋಡೆ ಮುರಿದು ಅದರಲ್ಲಿ ಬಿದ್ದಿದೆ” ಎಂದು ಅವರು ಹೇಳಿದರು.
“ಸದ್ದು ಕೇಳಿದ ಕೂಡಲೇ ಜಂಕ್ಷನ್ ನಲ್ಲಿ ಮತ್ತು ಸುತ್ತಮುತ್ತ ನಿಂತವರು ಓಡಿ ಬಂದರು. ಕೂಡಲೇ ರಕ್ಷಣಾ ಕಾರ್ಯ ಪ್ರಾರಂಭವಾಯಿತು” ಎಂದು ಚಕ್ಕಪ್ಪನ್ ಹೇಳಿದರು.