ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಹೋಗಿದ್ದಲ್ಲದೇ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಮಿರರ್ ಒಡೆದು ಹಾಕಿ ಪುಂಡಾಟ ಮೆರೆದಿದ್ದ ಬೈಕ್‌ನ ಹಿಂಬದಿ ಸವಾರನನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಗೆಯೆ ಬೈಕ್ ವಿರುದ್ಧ ದಾಖಲಾಗಿದ್ದ 19.500 ರೂ. ದಂಡ ಸಂಗ್ರಹಿಸಲಾಗಿದೆ. ಕೆ.ಎಸ್.ಲೇಔಟ್‌ನ ರೋಹಿತ್(21) ಬಂಧಿತ.
ನ.5 ರಂದು ಕನಕಪುರ ಮುಖ್ಯರಸ್ತೆಯಲ್ಲಿ ಮೂವರು ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಬರುತ್ತಿದ್ದ ಕಾರೊಂದರ ಎಡ ಭಾಗದ ಮೀರರ್ ಅನ್ನು ಹಿಂಬದಿ ಸವಾರ ಹೊಡೆದು ಹಾಕಿ ನೆಲಕ್ಕೆ ಬೀಳಿಸಿದ್ದ. ಈ ಬಗ್ಗೆ ಥರ್ಡ್‌ಐ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳ ಲಾಗಿತ್ತು.
ಜತೆಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ನಗರ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಹೀಗಾಗಿ ಕೂಡಲೇ ಎಚ್ಚೆತ್ತುಕೊಂಡ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು, ವಾಹನದ ವಿಳಾಸ ಮತ್ತು ಮಾಲೀಕರನ್ನು ಪತ್ತೆ ಹಚ್ಚಿ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡರು.
ಮಿರರ್ ಮುರಿದಿದ್ದ ಆರೋಪಿ ರೋಹಿತ್‌ನನ್ನು ವಶಕ್ಕೆ ಪಡೆದ ಸಂಚಾರ ಪೊಲೀಸರು, ಕುಮಾರಸ್ವಾಮಿ ಲೇಔಟ್‌ನ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೃತ್ಯ ನಡೆದ ವೇಳೆ ರೋಹಿತ್ ವಾಹನ ಸವಾರಿ ಮಾಡಲು ತನ್ನ ಸ್ನೇಹಿತನಿಗೆ ನೀಡಿದ್ದ ಎಂಬುದು ಗೊತ್ತಾಗಿದೆ. ಈ ದ್ವಿಚಕ್ರ ವಾಹನದ ಮೇಲೆ ಬಾಕಿ ಉಳಿದಿದ್ದ ಪ್ರಕರಣಗಳನ್ನುಪರಿಶೀಲಿಸಿದ್ದಾಗ ಒಟ್ಟು 39 ಪ್ರಕರಣಗಳಲ್ಲಿ 19.500 ರೂ. ಬಾಕಿ ಇರುವುದು ಕಂಡು ಬಂದಿದ್ದು, ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.