ಮಂಡ್ಯ: ರಸ್ತೆಯಲ್ಲಿ ಒಕ್ಕಣೆ ಮಾಡಲು ಹಾಕಿದ್ದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿ ಭೂವರಹನಾಥಸ್ವಾಮಿ ದೇಗುಲದ ಬಳಿ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರಾಜಗೋಪಾಲ್ ಕುಟುಂಬದವರು ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಕಾರಿನಲ್ಲಿ ತಾಲೂಕಿನ ಪುರಾಣ ಪ್ರಸಿದ್ಧ ಭೂವರಹನಾಥ ಸ್ವಾಮಿಯ ದೇಗುಲ ವೀಕ್ಷಣೆಗೆ ಬರುತ್ತಿದ್ದ ಸಮಯದಲ್ಲಿ ದೇವಸ್ಥಾನದ ಸಮೀಪದ 2-3 ಕಿಮೀ ದೂರದಲ್ಲಿ ರಸ್ತೆಗೆ ಒಕ್ಕಣೆ ಮಾಡಲು ಹರಡಿದ್ದ ಹುರುಳಿಕಾಳು ಸಿಪ್ಪೆಯ ಮೇಲೆ ಕಾರು ಚಲಿಸಿದೆ.
ಪರಿಣಾಮ ಕಾರಿನ ಚಕ್ರಗಳಿಗೆ ಸಿಪ್ಪೆ ಸಿಲುಕಿಕೊಂಡಿದೆ. ಆದರೆ ಅದನ್ನು ಗಮನಿಸದ ಕಾರು ಭೂವರಹನಾಥ ದೇವಸ್ಥಾನದ ಬಳಿ ಬಂದು ಕಾರು ಪಾರ್ಕಿಂಗ್ ಮಾಡುವ ಸಮಯದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು ಏಕಾಏಕಿ ಜೋರಾಗಿ ಹೊತ್ತಿ ಉರಿಯಲಾರಂಭಿಸಿದೆ.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ : ಪೊಲೀಸ್ ವರಿಷ್ಠಾಧಿಕಾರಿ ಸೂಚನೆ
ಬೆoಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ರಾಜಗೋಪಾಲ್ ಮತ್ತು ಅವರ ತಾಯಿ, ಹೆಂಡತಿ, ಮತ್ತು ಮಗಳು ಕೂಡಲೇ ಕಾರಿನಿಂದ ಇಳಿದಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಧಗಧಗನೆ ಹೊತ್ತಿಕೊಳ್ಳಲಾರಂಭಿಸಿದೆ. ಕೂಡಲೇ ಸ್ಥಳೀಯರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು.
ಆದರೆ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.