Advertisement
ಮಂಗಳೂರಿನ ಖಾಸಗಿ ಕಾಲೇಜಿನ ನಾಲ್ವರು ವೈದ್ಯರು ಮತ್ತು ಮಹಿಳಾ ಪ್ರೊಫೆಸರ್ ಇದ್ದ ಕಾರು ರವಿವಾರ ಕಳಸಕ್ಕೆ ಹೋಗಿ ವಾಪಸ್ ಮಂಗಳೂರಿಗೆ ಹಿಂದಿರುಗುತ್ತಿತ್ತು. ಮಾಳ ಎಸ್. ಕೆ. ಬಾರ್ಡರ್‌ನಲ್ಲಿ ಕಾರನ್ನು ಹಿಂಬಾಲಿಸಿದ ಗುಂಪು ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿದೆ. ಕಾರಿನಲ್ಲಿ ಅನ್ಯಕೋಮಿನವರು ಇದ್ದಾರೆಂದು ಪ್ರಶ್ನಿಸಿ ಆ ಗುಂಪು ಕಾರಿನಲ್ಲಿದ್ದವರಿಗೆ ಅವಾಚ್ಯವಾಗಿ ಪ್ರಶ್ನಿಸಿದೆ. ಕಾರಿನಲ್ಲಿದ್ದ ಮಹಿಳೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಕಳ ವಿಭಾಗ ಡಿವೈಎಸ್ಪಿ ಅರವಿಂದ ಕುಲಗುಜ್ಜಿ, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಠಾಣಾಧಿಕಾರಿಗಳಾದ ಸಂದೀಪ್ ಶೆಟ್ಟಿ, ದಿಲೀಪ್ ಸ್ಥಳಕ್ಕೆ ತೆರಳಿ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ನಾರು, ಸಂದೀಪ್ ಪೂಜಾರಿ ಮಿಯ್ನಾರು, ಸುಜಿತ್ ಬಂಧಿತರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಐದು ಮಂದಿ ಆ ದಿನವೇ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.
ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅದೇ ಕಾಲೇಜಿನ ಮಹಿಳಾ ಪೊ›ಫೆಸರ್ ಒಂದೇ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಹಿಂದೂ ಕಾರ್ಯಕರ್ತರಿಗೆ ಮಾಹಿತಿ ಲಭಿಸಿತ್ತು. ಕಾರನ್ನು ಹಿಂಬಾಲಿಸಿದ ಕಾರ್ಯಕರ್ತರಿಗೆ ಕಾರಿನಿಂದ ಕಿರುಚಾಟ ಕೇಳಿದೆ. ಯುವತಿಯರು ಅರೆಬರೆ ಬಟ್ಟೆಯಲ್ಲಿ ಕಂಡುಬಂದಿದ್ಧಾರೆ. ಕಾರಿನ ಗ್ಲಾಸ್ ಹಾಗೂ ಬಾಗಿಲು ತೆರೆಯದೇ ಇದ್ದ ಕಾರಣ ಕಾರನ್ನು ತಡೆದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಐವರು ಕಾರ್ಯಕರ್ತರನ್ನೇ ಬಂಧಿಸಿರುವುದು ಖಂಡನೀಯ. ಪೊಲೀಸರು ನೈತಿಕ ಪೊಲೀಸ್ ಗಿರಿ ಆರೋಪದಲ್ಲಿ ಕಾರ್ಯಕರ್ತರನ್ನೇ ಬಂಧಿಸುವುದು ಯಾವ ನ್ಯಾಯ ಎಂದು ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ನೈತಿಕ ಪೊಲೀಸ್ ಗಿರಿ ನಡೆಸಿದ್ದೇ ಆದರೆ ಅವರೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರಾ? ಪೊಲೀಸರು ಬರುವಾಗ ಸ್ಥಳದಲ್ಲಿ ಇರುತ್ತಿದ್ದರಾ ಎಂದು ಸಂಘಟನೆ ಪ್ರಶ್ನಿಸಿದೆ. ಲವ್ ಜೆಹಾದ್‌ನಂತಹ ಘಟನೆಗಳು ನಡೆಯುತ್ತಿದ್ದರೂ ಈ ರೀತಿ ತಿರುಗಾಡುವ ಜೋಡಿಗಳನ್ನು ಪ್ರಶ್ನಿಸಿದರೆ ಹಿಂದೂ ಕಾರ್ಯಕರ್ತರನ್ನೇ ಬಂಧಿಸುತ್ತಾರೆ ಎಂದು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಕಾನೂನನ್ನು ದುರುಪಯೋಗ ಪಡಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ವಿರುದ್ಧ ಸುಮ್ಮನೆ ಕೇಸ್ ಹಾಕೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.