ಮಂಗಳೂರು: ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದಾಗ ಬಹುತೇಕವಾಗಿ ಚತುಶ್ಚಕ್ರ ವಾಹನಗಳ ಚಾಲಕರನ್ನು ಹೊಣೆಗಾರರನ್ನಾಗಿ ಮಾಡುವುದು ರೂಢಿ. ದ್ವಿಚಕ್ರ ವಾಹನ ಸವಾರರನ್ನು ಜವಾಬ್ದಾರರನ್ನಾಗಿ ಮಾಡುವುದು ಅಪರೂಪದಲ್ಲಿ ಅಪರೂಪ. ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಜೆ.ಎಂ.ಎಫ್.ಸಿ. 3ನೇ ನ್ಯಾಯಾಲಯವು ಬೈಕ್ ಸವಾರನಿಗೆ 1,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿದೆ.
ಪ್ರಕರಣದ ವಿವರ
ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಬುಡೋಳಿಯ ಸುಂದರ ಪೂಜಾರಿ (75) ಅವರು 2015ರ ಅಕ್ಟೋಬರ್ 3ರಂದು ನಗರದ ಕದ್ರಿ ಶಿವಭಾಗ್‌ನಿಂದ ನಂತೂರು ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕುಲಶೇಖರದ ಗಣೇಶ್ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಕಾರಿಗೆ ಢಿಕ್ಕಿ ಹೊಡೆದಿತ್ತು. ಆಪಘಾತದಲ್ಲಿ ಗಣೇಶ್ ಅವರಿಗೆ ಗಾಯಗಳಾಗಿದ್ದವು. ಈ ಬಗ್ಗೆ ಆಗ ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ಇನ್‌ಸ್ಪೆೆಕ್ಟರ್ ಆಗಿದ್ದ ಶಿವಪ್ರಕಾಶ್ ಎಚ್. ಅವರು ಕೇಸು ದಾಖಲಿಸಿ ತನಿಖೆ ನಡೆಸಿ ಆರೋಪ ಪಟ್ಟಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬೈಕ್ ಸವಾರ ಗಣೇಶ್ ಈ ಅಪಘಾತಕ್ಕೆ ತಾನು ಕಾರಣನಲ್ಲ; ಕಾರು ಚಾಲಕ ಸುಂದರ ಪೂಜಾರಿ ಅವರದ್ದೇ ತಪ್ಪು ಎಂದು ಆರೋಪಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಜೆ.ಎಂ.ಎಫ್.ಸಿ. 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ಆರ್. ಅವರು ವಾದ ಪ್ರತಿವಾದಗಳನ್ನು ಆಲಿಸಿ ಈ ಪ್ರಕರಣದಲ್ಲಿ ಬೈಕ್ ಚಾಲಕನದ್ದೇ ತಪ್ಪು ಎಂಬ ತೀರ್ಮಾನಕ್ಕೆ ಬಂದು ಆರೋಪಿ ಗಣೇಶನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಬಿ. ಅವರು ವಾದ ಮಂಡಿಸಿದ್ದರು.