ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಿಂದ ಜಿಗಿದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು ಮಹಿಳೆ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಮಂಗಳವಾರ ಮುಂಜಾನೆ ನೈಸ್ ರಸ್ತೆಯಲ್ಲಿ ನಡೆದಿದೆ.
ರಾಮಮೂರ್ತಿನಗರದ ವಿಜಿನಾಪುರ ನಿವಾಸಿಗಳಾದ ಸಿಂಧೂ(32), ಆಕೆಯ ಮಕ್ಕಳಾದ ಕುಶವಿ (2) ಮತ್ತು ಪ್ರಣವಿ(6) ಮೃತರು. ದುರ್ಘಟನೆಯಲ್ಲಿ ಕಾರು ಚಾಲಕ ಹಾಗೂ ಸಿಂಧೂ ಅವರ ಪತಿ ಮಹೇಂದ್ರನ್(35) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ತಮಿಳುನಾಡು ಮೂಲದ ಮಹೇಂದ್ರನ್ ನಗರದಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳಿಂದ ಪತ್ನಿ, ಮಕ್ಕಳ ಜತೆ ವಿಜಿನಾಪುರದಲ್ಲಿ ವಾಸವಾಗಿದ್ದಾರೆ. ಕಾರಿನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ಮಂಗಳವಾರ ನಸುಕಿನ 3 ಗಂಟೆ ಸುಮಾರಿಗೆ ನೈಸ್ ರಸ್ತೆಯಲ್ಲಿ ಮೈಸೂರು ಕಡೆಯಿಂದ ಕನಕಪುರ ರಸ್ತೆ ಕಡೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಸೋಮಪುರದ ಕ್ಲೋವರ್ ಲೀಫ್ ಬಳಿ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕದಿಂದ ಜಿಗಿದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದೆ. ಡಿಕ್ಕಿ ರಭಸಕ್ಕೆ ಲಾರಿ ಕೂಡ ಉರುಳಿ ಬಿದ್ದಿದ್ದು, ಕಾರು ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಈ ವೇಳೆ ಪತ್ನಿ ಸಿಂಧೂ ಮತ್ತು ಪುತ್ರಿ ಕುಶವಿ ಸಜೀವ ದಹನವಾಗಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದ ಇತರೆ ವಾಹನಗಳ ಸವಾರರು ಮಹೇಂದ್ರನ್ ಹಾಗೂ ಪ್ರಣವಿಯನ್ನು ಕಾರಿನಿಂದ ಹೊರಗೆ ತೆಗೆದು, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಹೆಚ್ಚು ಸುಟ್ಟು ಗಾಯಗಳಿಂದ ಬಳಲುತ್ತಿದ್ದ ಪ್ರಣವಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರಿನ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ತಾಯಿ-ಮಗಳು ಮೃತಪಟ್ಟಿದ್ದಾರೆ. ಕೆಲ ಕ್ಷಣಗಳಲ್ಲೇ ತಲಘಟ್ಟಪುರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಫ್ಎಸ್‌ಎಲ್ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅತಿ ವೇಗವೇ ಅಪಘಾತಕ್ಕೆ ಕಾರಣ?: ಪ್ರಾಥಮಿಕ ಮಾಹಿತಿ ಪ್ರಕಾರ, ಮಹೇಂದ್ರನ್ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಆದರೆ, ಎಲ್ಲಿಗೆ ಹೋಗಿದ್ದರು ಎಂಬುದು ಗೊತ್ತಿಲ್ಲ. ಮೈಸೂರು ಮಾರ್ಗವಾಗಿ ಕಾರು ಬಂದಿರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ. ಅಪಘಾತದಲ್ಲಿ ಲಾರಿ ಕೂಡ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಲಾರಿ ಚಾಲಕನಿಗೆ ಸಣ್ಣ ಗಾಯಗಳಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಮೈಕೋ ಲೇಔಟ್ ಉಪವಿಭಾಗ ಎಸಿಪಿ ಪ್ರತಾಪ್ ರೆಡ್ಡಿ, ಠಾಣಾಧಿಕಾರಿ ವಿಶ್ವನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.