Advertisement
ಫೋಟೋಗ್ರಾಫರ್ ಪಾಲ್ ನಿಕೆಲನ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಪಾಲ್ ಹಾಗೂ ಸೀ ಲೆಗಸಿ ಸಂಸ್ಥೆಯ ಇತರರು ಕೆನಡಿಯನ್ ದ್ವೀಪಕ್ಕೆ ತೆರಳಿದ್ದಾಗ ಈ ದೃಶ್ಯ ಕಂಡುಬಂದಿದೆ. ಬಿಳಿ ಕೂದಲನ್ನು ಇಳಿಬಿಟ್ಟುಕೊಂಡು, ಅತ್ಯಂತ ಕೃಶವಾದ ಮತ್ತು ಕಣ್ಣಿಂದ ನೀರು ಸುರಿಸುತ್ತಿರುವ ಹಿಮಕರಡಿಗಳು ಪಾಲ್ ಮತ್ತು ತಂಡದವರನ್ನು ನಿಬ್ಬೆರಗಾಗಿಸಿದೆ. ಸಾಮಾನ್ಯವಾಗಿ ಕೆನಡಾದಲ್ಲಿ ಬೆಳೆದ ನಾನು ದಷ್ಟಪುಷ್ಟವಾದ ಹಿಮಕರಡಿಗಳನ್ನು ನೋಡಿದ್ದೇನೆ. ಆದರೆ ಈ ದೃಶ್ಯ ನನ್ನ ಮನಸು ಕಲಕಿತು ಎಂದು ಪಾಲ್ ಹೇಳಿದ್ದಾರೆ.ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಮಕರಡಿಗಳು ಅವನತಿಯ ಅಂಚಿಗೆ ಸಾಗಲಿವೆ ಎಂದು ವಿಜ್ಞಾನಿಗಳು ಹಿಂದಿನಿಂದಲೂ ಹೇಳುತ್ತಿದ್ದಾರೆ. ಆದರೆ ಇದನ್ನು ಸಾಕ್ಷೀಕರಿಸುವಂತಹ ದೃಶ್ಯ ಇದಾಗಿದೆ. ಸಾಮಾನ್ಯವಾಗಿ ಹಿಮಕರಡಿಗಳಿಗೆ ಹಿಮದ ಗಡ್ಡೆಗಳ ಅಡಿಯಲ್ಲಿರುವ ಸೀಲ್‌ಗಳೇ ಆಹಾರ. ಆದರೆ ತಾಪಮಾನ ಹೆಚ್ಚುತ್ತಿರುವುದರಿಂದ ಹಿಮಗಡ್ಡೆಗಳು ಕರಗಿದ್ದು, ಸೀಲ್‌ಗಳು ಸಮುದ್ರದ ಮಧ್ಯಭಾಗಕ್ಕೆ ತೆರಳಿವೆ. ಹೀಗಾಗಿ ಹಿಮಕರಡಿಗಳಿಗೆ ಸೀಲ್‌ಗಳು ಸಿಗುತ್ತಿಲ್ಲ. ಇನ್ನೊಂದೆಡೆ ಹಿಮಕರಡಿಗಳು ಸೀಲ್‌ಗಳನ್ನು ಗುರುತಿಸಲು ಗಾಳಿಯನ್ನೇ ಬಳಸು ತ್ತವೆ. ಗಾಳಿಯಲ್ಲಿ ಬರುವ ಸೀಲ್‌ಗಳ ವಾಸನೆಯನ್ನು ಹಿಡಿದು ಅವುಗಳಿದ್ದಲ್ಲಿಗೆ ಹಿಮಕರಡಿಗಳು ದಾಳಿಯಿಡುತ್ತವೆ. ಆದರೆ ಈಗ ತಾಪಮಾನ ವೈಪರೀತ್ಯದಿಂದಾಗಿ ಗಾಳಿಯ ವೇಗ ಹೆಚ್ಚಿದ್ದು, ಸೀಲ್‌ಗಳ ಸುಳಿವೂ ಅವುಗಳಿಗೆ ಸಿಗುವುದಿಲ್ಲ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.