ಬೆಂಗಳೂರು: ರಾತ್ರಿ ವೇಳೆ ಕ್ಯಾಬ್‌ಗಳನ್ನು ಬುಕ್ ಮಾಡಿ ನಿರ್ಜನ ಪ್ರದೇಶಗಳಿಗೆ ಕರೆದೊಯ್ದ ಬಳಿಕ ಮಾರಕಾಸ್ತ್ರಗಳಿಂದ ಚಾಲಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳು ಪರಪ್ಪನ ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಘವೇಂದ್ರ ಬಡಾವಣೆ ಕೋಳಿ ಫಾರಂ ಲೇಔಟ್ ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನ (28), ಕೃಷ್ಣಗಿರಿಯ ಜಯಂತಿ ಕಾಲೋನಿಯ ಉಮೇಶ್ (26) ದೊಡ್ಡ ನಾಗಮಂಗಲದ ಮಧು ಅಲಿಯಾಸ್ ಮೇಕೆ (21) ಬಂಧಿತರು. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ ಎರಡು ಮಾರುತಿ ರಿಟ್ಜ್ ಕಾರು, 592 ಗ್ರಾಂ ಚಿನ್ನಾಭರಣ ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ರೀನಿವಾಸ್, ಅಪರಾಧ ಜಗತ್ತಿನಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವ ಸಲುವಾಗಿ ತನ್ನದೇ ಹುಡುಗರ ಗ್ಯಾಂಗ್ ಕಟ್ಟಿಕೊಂಡಿದ್ದ. ಅವರ ಮೋಜಿನ ಜೀವನ, ಖರ್ಚು ವೆಚ್ಚಗಳನ್ನು ನಿಭಾಯಿಸುವ ಸಲುವಾಗಿ ರಾತ್ರಿ ವೇಳೆ ಕ್ಯಾಬ್‌ಗಳನ್ನು ಬುಕ್ ಮಾಡುತ್ತಿದ್ದ, ಬಳಿಕ ತನ್ನ ಹುಡುಗರನ್ನು ಕಾರಿನ ಹಿಂದೆ ಪಾಲೋ ಮಾಡುವಂತೆ ಹೇಳಿ ನಿರ್ಜನ ಪ್ರದೇಶಗಳಲ್ಲಿ ಕ್ಯಾಬ್ ಚಾಲಕನನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಮೊಬೈಲ್, ಹಣ, ಕೆಲವೊಮ್ಮೆ ಕಾರನ್ನು ದರೋಡೆ ಮಾಡುತ್ತಿದ್ದರು.
ಬಳಿಕ ಕದ್ದ ಕಾರುಗಳನ್ನು ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು, ಕೆಲವೊಮ್ಮೆ ತಮ್ಮ ಕೃತ್ಯಗಳಿಗೂ ಅದೇ ಕಾರುಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಕ್ಯಾಬ್ ಚಾಲಕರೊಬ್ಬರಿಂದ ದಾಖಲಾದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿತ್ತು, ಈ ವೇಳೆ ಆರೋಪಿ ಶ್ರೀನಿವಾಸ್ ಕ್ಯಾಬ್ ಬುಕ್ ಮಾಡಿದ್ದ ಮೊಬೈಲ್ ನಂಬರ್ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು.
ಶ್ರೀನಿವಾಸ್, ಕದ್ದ ಪೋನ್‌ನಲ್ಲಿದ್ದ ನಂಬರ್‌ನಿಂದಲೇ ಕ್ಯಾಬ್ ಮಾಡಿದ್ದ ಎಂಬ ಸಂಗತಿ ತನಿಖೆ ವೇಳೆ ಗೊತ್ತಾಗಿತ್ತು. ಹೀಗಾಗಿ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎಚ್‌ಎಸ್‌ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ದರೋಡೆ, ಸುಲಿಗೆ ಸಂಬಂಧ ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ಮೊದಲು ವೀವರ್ ಕಾಲೋನಿಯಲ್ಲಿ ವಾಸವಾಗಿದ್ದ ಆರೋಪಿ ಶ್ರೀನಿವಾಸ್, ತನ್ನದೇ ಗುಂಪು ಕಟ್ಟಿಕೊಂಡು ಮತ್ತೋರ್ವ ವ್ಯಕ್ತಿ ಕೆಂಬತ್ತಳ್ಳಿ ವಾಸಿ ಪರಮೇಶ್ ಗುಂಪಿನ ವಿರುದ್ಧ ಜಗಳ ನಡೆಸುತ್ತಿದ್ದ.ಈ ಸಂಬಂಧ ಶ್ರೀನಿವಾಸ್ ವಿರುದ್ಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೊತೆಗೆ ಈತನ ಗ್ಯಾಂಗ್ ತಮಿಳುನಾಡಿನ ಗುಂಬಳಾಪುರ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಪ್ರಕರಣ ದಾಖಲಾಗಿದೆ.