Advertisement

ಮೀನುಗಳ ಜತೆ ಗಾಂಜಾತರಿಸಿ ಮಾರುತ್ತಿದ್ದವರ ಸೆರೆ

12:13 PM Feb 15, 2018 | Team Udayavani |

ಬೆಂಗಳೂರು: ಒಡಿಶಾದಿಂದ ನಗರಕ್ಕೆ ಥರ್ಮಕೋಲ್‌ ಬಾಕ್ಸ್‌ನಲ್ಲಿ ಒಣ ಮೀನುಗಳ ಜತೆ ಗಾಂಜಾ ತರಿಸಿ ಮಾರಾಟ
ಮಾಡುತ್ತಿದ್ದ ಮೂವರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

Advertisement

ತಮಿಳುನಾಡು ಮೂಲದ ಗೋವಿಂದರಾಜು (29), ರಾಮನಗರದ ಬಸವರಾಜ್‌ (28), ಚಾಮರಾಜನಗರದ ಮಹೇಂದ್ರ (22) ಬಂಧಿತರು. ಆರೋಪಿಗಳಿಂದ 75 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಆರೋಪಿಗಳು, ಪೇಟಿಂಗ್‌ ಕೆಲಸ ಮಾಡುತ್ತಿದ್ದರು. ಬಳಿಕ ಹೆಚ್ಚಿನ ಹಣ ಸಂಪಾದಿಸಲು ಈ ದಂಧೆಗೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಕೂಡ ಮಾದಕ ವಸ್ತು ವ್ಯಸನಿಗಳಾಗಿದ್ದು, ಈ ಮೊದಲು ನವೀನ್‌ ಎಂಬಾತನ ಮೂಲಕ ಗಾಂಜಾ ಖರೀದಿಸಿ ಸೇವಿಸುತ್ತಿದ್ದರು. ಆಗಾಗ್ಗ ಆರೋಪಿಗಳನ್ನು ಭೇಟಿಯಾಗುತ್ತಿದ್ದ ನವೀನ್‌, ಹೆಚ್ಚಿನ ಹಣ ಗಳಿಸಲು ದಂಧೆಗೆ ಇಳಿಯುವಂತೆ ಪ್ರೇರೆಪಿಸಿ, ತಾನು ದಂಧೆಯಿಂದ ದೂರವಾಗಿದ್ದ. ಆದರೆ, ಇದೇ ವೇಳೆ ಒಡಿಶಾ ಮೂಲದ ಗಾಂಜಾ ಮಾರಾಟಗಾರ ಸಂಪತ್‌ರಾಜ್‌ ಎಂಬಾತನನ್ನು ಆರೋಪಿಗಳಿಗೆ ಪರಿಚಯಸಿಕೊಟ್ಟಿದ್ದ. ಸಂಪತ್‌ರಾಜ್‌, ಬಂಧಿತರಿಗೆ ತನ್ನೊಂದಿಗೆ ಸೇರಿದರೆ ಲಕ್ಷಾಂತರ ರೂ. ಹಣ ನೀಡುವುದಾಗಿ
ಆಮಿಷವೊಡ್ಡಿದ್ದ. ಅಷ್ಟೇ ಅಲ್ಲದೆ, ಒಂದು ಲಕ್ಷ ರೂ. ಮುಂಗಡ ಹಣ ನೀಡಿ ಮೂವರಿಗೂ ಕೋಣನಕುಂಟೆಯಲ್ಲಿ ಬಾಡಿಗೆ ಮನೆ ಕೊಡಿಸಿದ್ದ. ಜತೆಗೆ ಪ್ರತಿ ತಿಂಗಳು ಬಾಡಿಗೆ ಸಹ ಆತನೇ ಪಾವತಿಸುತ್ತಿದ್ದು, ಮಾಸಿಕ ಸಂಬಳ ನಿಗದಿ ಮಾಡಿದ್ದ. ಇವರ ಮೂಲಕ ತನ್ನ ಗ್ರಾಹಕರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂದು ಡಿಸಿಪಿ ಬೋರಲಿಂಗಯ್ಯ ಹೇಳಿದರು. 

ಒಣ ಮೀನಿನಲ್ಲಿ ಗಾಂಜಾ!: ಸಂಪತ್‌ರಾಜ್‌ ಒಡಿಶಾದಿಂದಲೇ ಬಸ್‌ ಹಾಗೂ ಟ್ರಕ್‌ಗಳಲ್ಲಿ ಥರ್ಮಕೋಲ್‌ ಬಾಕ್ಸ್‌ಗಳಲ್ಲಿ ಒಣ ಮೀನು ಇಟ್ಟು ಅದರೊಳಗೆ ಕೆ.ಜಿಗಟ್ಟಲ್ಲೇ ಗಾಂಜಾ ಇಟ್ಟು, ಒಡಿಶಾದಿಂದ ವಿಶಾಖಾಪಟ್ಟಣಂ, ಡೆಂಕಣಿಕೋಟೆ ಮೂಲಕ ನಗರಕ್ಕೆ ಆಗಮಿಸುವ ಬಸ್‌ಗಳ ಮೂಲಕ ಕಳುಹಿಸುತ್ತಿದ್ದ. ಇದನ್ನು ಆರೋಪಿಗಳು ತಮ್ಮ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟು, ಬಿಸಿನಲ್ಲಿ ಒಣಗಿಸುತ್ತಿದ್ದರು. ಗಾಂಜಾ ವಾಸನೆಯಿಂದ ಅನುಮಾನಗೊಂಡ ಪ್ರಶ್ನಿಸಿದ ಸ್ಥಳೀಯರಿಗೆ ಮೀನಿನ ವಾಸನೆ ಎಂದು ನಂಬಿಸುತ್ತಿದ್ದರು. ಬಳಿಕ ಹೋಟೆಲ್‌
ನಲ್ಲಿ ಚಪಾತಿಗಳನ್ನು ಪ್ಯಾಕ್‌ ಮಾಡುವ ರೀತಿಯಲ್ಲಿ ಗಾಂಜಾವನ್ನು ರೋಲ್‌ ಮಾಡಿ ಪ್ಯಾಕ್‌ ಮಾಡುತ್ತಿದ್ದರು. ಒಂದು ರೋಲ್‌ ಅನ್ನು 200-500 ರೂಪಾಯಿಗೆ ಸಾಫ್ಟ್‌ ವೇರ್‌ ಎಂಜಿಯರ್‌, ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next