ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಜೂ.30ರಂದು ಗಾಂಜಾ ಸೇವಿಸಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳನ್ನು ಬೀಸಿ ಆತಂಕದ ವಾತಾವರಣ ಸೃಷ್ಟಿಸಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಅಂಜನಾನಗರ ನಿವಾಸಿ ಸುಹಾಸ್ (21) ಮಾಗಡಿ ಮುಖ್ಯರಸ್ತೆಯ ಕಾಚೋಹಳ್ಳಿ ಕ್ರಾಸ್ ನಿವಾಸಿ ಮಾರೇಗೌಡ ಅಲಿಯಾಸ್ ಮಹೇಶ್ (23) ಬಂಧಿತರು. ತಲೆಮರೆಸಿಕೊಂಡಿರುವ ಆರೋಪಿಗಳಾದ ರಿಜ್ವಾನ್, ಅಕºರ್, ನಾಗೇಂದ್ರ ಮತ್ತು ಲೋಕೇಶ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಜೂ.30ರಂದು ಗಾಂಜಾ ಸೇವಿಸಿದ್ದ ಆರೋಪಿಗಳು, ಬ್ಯಾಡರಹಳ್ಳಿಯಲ್ಲಿ ಸಾರ್ವಜನಿಕರ ಕಡೆ ಮಾರಕಾಸ್ತ್ರಗಳನ್ನು ಬೀಸಿ ಆತಂಕ ಸೃಷ್ಟಿಸಿದ್ದರು. ಅಲ್ಲದೆ, ವಿಜಯನಗರದಿಂದ ಬ್ಯಾಡರಹಳ್ಳಿಯವರೆಗೂ ರಸ್ತೆ ಬದಿ ನಿಂತಿದ್ದ ಪಾನಿಪುರಿ ಅಂಗಡಿ ಸೇರಿ ತಳ್ಳುವ ಗಾಡಿ ವ್ಯಾಪಾರಿಗಳಿಗೆ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು.
ಅಂಗಡಿಗಳ ಪಿಠೊಪಕರಗಳನ್ನು ಧ್ವಂಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿತ್ತು.
ಈ ಮಧ್ಯೆಆರೋಪಿಗಳು ಎರಡು ದಿನಗಳ ಹಿಂದೆ ಕಾಮಾಕ್ಷಿಪಾಳ್ಯದ ಪ್ರೇಮ್‌ನಗರದಲ್ಲಿ ಡಕಾಯಿತಿ ಮಾಡಲು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದರು.