ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಹಾಗೂ ಅವರ ಪೋಷಕರನ್ನು ಮಡಿವಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕರ ಪೋಷಕರಾದ ಮಡಿವಾಳದ ಸಲೀಂ ಪಾಷ, ಆಸೀಫ್ ಮತ್ತು ಸೈಯದ್ ಫಾರೂಕ್ ಬಂಧಿತರು. ಮತ್ತೂಬ್ಬ ಬಾಲಕನ ತಂದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಬಾಲಕರು ಭಾನುವಾರ ನಸುಕಿನಲ್ಲಿ ಹೊಸೂರು ಮುಖ್ಯರಸ್ತೆಯಲ್ಲಿ ಬೈಕ್‌ಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಮಡಿವಾಳ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಪುಟ್ಟಮಾದಯ್ಯ ನೇತೃತ್ವದ ತಂಡ ಮಫ್ತಿಯಲ್ಲಿ ಹೊಸೂರು ಮುಖ್ಯ ರಸ್ತೆಯ ಮಂಗಮ್ಮನಪಾಳ್ಯ-ಗಾರೆಪಾಳ್ಯ ಜಂಕ್ಷನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇದೇ ವೇಳೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದ ಬಾಲಕರು ಜಂಕ್ಷನ್‌ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ.
ಇದನ್ನು ಗಮನಿಸಿದ ತಂಡ ಅವರನ್ನು ಸ್ಥಳದಲ್ಲೇ ಬಂಧಿಸಿದೆ. ಹಾಗೇ ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಆರೋಪದ ಮೇಲೆ ಪೋಷಕರನ್ನೂ ಬಂಧಿಸಲಾಗಿದೆ. ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಬೈಕ್ ವ್ಹೀಲಿಂಗ್‌ನಿಂದ ಆತಂಕಗೊಂಡಿರುವ ಸಾರ್ವಜನಿಕರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಪಾಯಕಾರಿ ವ್ಹೀಲಿಂಗ್‌ನಿಂದ ಉಂಟಾಗುವ ತೊಂದರೆಗಳ ಬಗ್ಗೆ ನಗರ ಸಂಚಾರ ಪೊಲೀಸರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ವಲಯ ಸಂಚಾರ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆಗಿಳಿದಿದ್ದರು. ಈ ಮಧ್ಯೆ ಹೈಗ್ರೌಂಡ್ಸ್ ಸಂಚಾರ ಠಾಣೆ ವ್ಯಾಪ್ತಿಯ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಐದಾರು ಮಂದಿ ಯುವಕರ ಗುಂಪು ಒಮ್ಮೆಲೆ ಬೈಕ್ ವ್ಹೀಲಿಂಗ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಹೈಗ್ರೌಂಡ್ಸ್ ಠಾಣೆ ಮುಂಭಾಗದಲ್ಲೇ ಯುವಕರು ರಾಜಾರೋಷವಾಗಿ ವ್ಹೀಲಿಂಗ್ ಮಾಡಿದ್ದು, ಇತರೆ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ದ್ವಿಚಕ್ರ ವಾಹನಗಳ ನಂಬರ್ ಪತ್ತೆ ಹಚ್ಚಲಾಗಿದೆ. ಸದ್ಯದಲ್ಲೇ ಯುವಕರನ್ನು ಬಂಧಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.