Advertisement

ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿದ್ದವನ ಸೆರೆ

12:53 PM Oct 17, 2018 | Team Udayavani |

ನವದೆಹಲಿ: ಬೆಂಗಳೂರಿನ ಹಲವು ಬ್ಯಾಂಕ್‌ಗಳಿಗೆ  ಲಕ್ಷಾಂತರ ರೂ. ವಂಚಿಸಿ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ  ಉದ್ಯಮಿ ಮೊಹಮ್ಮದ್‌ ಯಾಹ್ಯಾ (47) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಿಬಿಐನ ಬೆಂಗಳೂರು ವಿಭಾಗದ ಆರ್ಥಿಕ ಅಪರಾಧಗಳ ಘಟಕ ಯಶಸ್ವಿಯಾಗಿದೆ.

Advertisement

2003ರಲ್ಲಿ ಇಲ್ಲಿನ ಹಲವು ಬ್ಯಾಂಕ್‌ಗಳಿಗೆ 43 ಲಕ್ಷ ರೂ, ವಂಚಿಸಿದ್ದ ಮೊಹಮ್ಮದ್‌ ಯಾಹ್ಯ, ವಿದೇಶಗಳಲ್ಲಿ ತಲೆ ಮರೆಸಿಕೊಂಡಿದ್ದು, ಬಹ್ರೈನ್‌ಲ್ಲಿ ಠಿಕಾಣಿ ಹೂಡಿದ್ದ. ಆತನ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆಯೇ ಅಲ್ಲಿ ಬಂಧನವಾಗಿತ್ತು. 

ಈ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತವಾದ ಸಿಬಿಐ ಆರ್ಥಿಕ ಘಟಕದ ಎಸ್ಪಿ ವಿಜಯೇಂದ್ರ ಬಿದರಿ ನೇತೃತ್ವದ ತಂಡ, ಬಹ್ರೈನ್‌ನಿಂದ ಆತನನ್ನು ಗಡಿಪಾರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರಿಗೆ ಕರೆತಂದಿದೆ. ಆರ್ಥಿಕ ಅಪರಾಧ ಎಸಗಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಇತ್ತೀಚೆಗೆ ಗಡಿಪಾರು ಮಾಡಿಸಿಕೊಂಡ ಮೊದಲ ಪ್ರಕರಣ ಇದಾಗಿದೆ.

ಆರೋಪಿ ಮೊಹಮ್ಮದ್‌ ಯಾಹ್ಯಾನನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಂಡಿರುವ ಸಿಬಿಐ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ, 2009ರಲ್ಲಿ ಆತನ ವಿರುದ್ಧ  ತನಿಖೆ ನಡೆಸಿ ಸಲ್ಲಿಕೆಯಾಗಿದ್ದ ದೋಷಾರೋಪ ಪಟ್ಟಿ ಅನ್ವಯದ ಅಂಶಗಳ ಆಧಾರದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ನ್ಯಾಯಾಲಯದಿಂದ “ಘೋಷಿತ ಅಪರಾಧಿ’ ಎಂದೆನಿಸಿಕೊಂಡಿರುವ ಮೊಹಮದ್‌ ಯಾಹ್ಯ, ವಿದೇಶಗಳಲ್ಲಿ ಉದ್ಯಮ ನಡೆಸುತ್ತಿದ್ದನೇ? ಅಥವಾ ಆತ ವಂಚನೆಗೆ ರೂಪಿಸಿದ ಸಂಚುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮೆಹೂಲ್‌ ಚೋಸ್ಕಿ, ನೀರವ್‌ ಮೋದಿ, ವಿಜಯ ಮಲ್ಯ ಸೇರಿದಂತೆ 28 ಆರ್ಥಿಕ ವಂಚನೆಗಳ ಅಪರಾಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಹಲವು ರಾಷ್ಟ್ರಗಳ ಜತೆಗೆ ಹಂಚಿಕೊಂಡಿತ್ತು.

Advertisement

ತೀವ್ರ ತನಿಖೆಗೆ ನಿರ್ಧಾರ: ಹತ್ತು ವರ್ಷಗಳ ಹಳೆವರ್ಷಗಳ ಹಳೆ ಪ್ರಕರಣಕ್ಕೆ ಮರುಜೀವ ನೀಡಿರುವ ಸಿಬಿಐ, ಆರೋಪಿ ಯಾಹ್ಯನ ವಿಚಾರಣೆ ವೇಳೆ, ವಂಚನೆಗೆ ಸಂಬಂಧಿಸಿದಂತೆ ಸಾಕ್ಷಧಾರಗಳ ಸಂಗ್ರಹ, ಆತ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಇನ್ನಿತರೆ ವ್ಯಕ್ತಿಗಳೊಂದಿಗೆ ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನೇ ಎಂಬುದರ ಬಗ್ಗೆಯೂ ತನಿಖೆ ನಡೆಸಲು ತೀರ್ಮಾನಿಸಿದೆ. ಜತೆಗೆ, ಬ್ಯಾಂಕ್‌ಗಳಿಗೆ ವಂಚನೆಗೆ ಸಂಬಂಧಿಸಿದಂತೆ ಆತನಿಗೆ ನೆರವಾದವರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬೇಕಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next