ಬೆಂಗಳೂರು: ನಗರದ ಪಶ್ಚಿಮ ಭಾಗದಲ್ಲಿ ಮಹಿಳೆಯರ ನಿದ್ದೆ ಕೆಡಿಸಿದ್ದ ಮೋಸ್ಟ್‌ವಾಂಟೆಡ್ ಸರಗಳ್ಳ ಅಚ್ಯುತ್ ಕುಮಾರ್ ಮೂರು ತಿಂಗಳ ಹಿಂದೆ ಜೈಲು ಸೇರಿದ ಬಳಿಕ ಸದ್ದಿಲ್ಲದೆ ಪರಾರಿಯಾಗಿ ಪತ್ನಿ ಮಹಾದೇವಿಯನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಡ ಅಚ್ಯುತ್ ಕುಮಾರ್‌ಗೆ ಸರಗಳವು ಮಾಡಲು ಪ್ರೇರಿಪಿಸಿದ್ದಲ್ಲದೆ, ಆತನ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಆರೋಪ ಸಂಬಂಧ ಮಹಾದೇವಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೂನ್.17ರಂದು ಅಚ್ಯುತ್‌ಕುಮಾರ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸುತ್ತಿದ್ದಂತೆ ಮಾರನೇ ದಿನ ಕಣ್‌ಮಿಣಕಿಯಲ್ಲಿರುವ ಮನೆಯನ್ನು ಖಾಲಿ ಮಾಡಿಕೊಂಡು ಪರಾರಿಯಾಗಿದ್ದ ಮಹಾದೇವಿ.
ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಳು. ಪ್ರಕರಣ ಸಂಬಂಧ ಆರೋಪಿ ಅಚ್ಯುತ್‌ಕುಮಾರ್ ವಿಚಾರಣೆ ವೇಳೆ, ಗಂಡನ ಸರಗಳವು ಕೃತ್ಯಕ್ಕೆ ಪತ್ನಿ ಮಹಾದೇವಿಯೂ ಸಹಕಾರ ನೀಡುತ್ತಿದ್ದಳು. ಗಂಡ ಕಳವು ಮಾಡಿಕೊಂಡು ಹೋಗುತ್ತಿದ್ದ ಸರಗಳನ್ನು ಮನೆಯಲ್ಲಿಯೇ ತೂಕ ಹಾಕುತ್ತಿದ್ದ ಆಕೆ, ಬಳಿಕ ಅವುಗಳನ್ನು ಮಾರಾಟ ಮಾಡುತ್ತಿದ್ದಳು ಎಂಬ ಸಂಗತಿ ಬಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಗೊತ್ತಾದ ಕೂಡಲೇ ಮನೆಖಾಲಿ ಮಾಡಿದ್ದ ಆಕೆ, ಕೋರಮಂಗಲದ ಅನಾಥ ಆಶ್ರಮಕ್ಕೆ ತೆರಳಿ, ತಾನು ಅನಾಥೆಯಾಗಿದ್ದು, ಗಂಡನಿಲ್ಲ ಎಂದು ಕತೆಕಟ್ಟಿ ಅಲ್ಲಿಯೇ ಉಳಿದುಕೊಂಡಿದ್ದಳು. ಒಂದು ವಾರದ ಹಿಂದಷ್ಟೇ ಆಶ್ರಮ ಖಾಲಿ ಮಾಡಿದ್ದು ಪುನ: ನಾಗಮಂಗಲ ಸಮೀಪದ ಆಶ್ರಮಕ್ಕೆ ಹೋಗಿ ಉಳಿದುಕೊಂಡಿದ್ದಳು.
ಈ ಬಗ್ಗೆ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು. ನಾಗರಬಾವಿ, ಕೆಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಗಳವು ಮಾಡುತ್ತಿದ್ದ ಅಚ್ಯುತ್ ಕುಮಾರ್‌ನನ್ನು ಜೂನ್ 17ರಂದು ಬಂಧಿಸಲು ತೆರಳಿದ ಕೆಂಗೇರಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ. ಹೀಗಾಗಿ, ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.