ಬೆಂಗಳೂರು: ನಕಲಿ ಕೀಗಳನ್ನು ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಸುದ್ದಗುಂಟೆಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉತ್ತರಹಳ್ಳಿ ನಿವಾಸಿ ಪ್ರಕಾಶ್ ಅಲಿಯಾಸ್ ಜ್ಯೋತಿಪ್ರಕಾಶ್ (32) ಬಂಧಿತ.
ಆರೋಪಿ ಇತ್ತೀಚೆಗೆ ಸುದ್ದಗುಂಟೆಪಾಳ್ಯದ ಭವಾನಿ ಲೇಔಟ್‌ನಲ್ಲಿರುವ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಆತನಿಂದ 40 ಲಕ್ಷ ರೂ. ಮೌಲ್ಯದ 1 ಕೆ.ಜಿ.216 ಗ್ರಾಂ ಚಿನ್ನಾಭರಣ, 1 ಕೆ.ಜಿ.800 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಎಂಟು ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಬಾಡಿಗೆ ಮನೆಗಳೇ ಟಾರ್ಗೆಟ್: ನಿರ್ಮಾಣ ಹಂತದ ಕಟ್ಟಡ ಅಥವಾ ಬಾಡಿಗೆ ಮನೆಗಳ ಮುಂಭಾಗದಲ್ಲಿ ಹಾಕುತ್ತಿದ್ದ “ಮನೆ ಬಾಡಿಗೆಗೆ’ ಎಂಬ ಬೋರ್ಡ್‌ಗಳನ್ನು ಗಮನಿಸುತ್ತಿದ್ದ ಆರೋಪಿ, ಪ್ರಕಾಶ್ ಅಲಿಯಾಸ್ ಜ್ಯೋತಿ ಪ್ರಕಾಶ್ ಅಲಿಯಾಸ್ ಬಾಲಾಜಿ ಅಲಿಯಾಸ್ ಬಾಲು ಅಲಿಯಾಸ್ ರಾಜು ಅಲಿಯಾಸ್ ಖಾನ್ ಎಂಬ ವಿವಿಧ ಹೆಸರುಗಳಿಂದ ಮನೆ ಮಾಲೀಕರನ್ನು ಪರಿಚಯಸಿಕೊಳ್ಳುತ್ತಿದ್ದ.
ಬಳಿಕ ಮಾಲೀಕರಿಂದ ಬಾಡಿಗೆ ಮನೆ ನೋಡುವುದಾಗಿ ಪಡೆಯುತ್ತಿದ್ದ 2-3 ಕೀಗಳ ಪೈಕಿ ಒಂದು ಕೀಯನ್ನು ಕಳವು ಮಾಡುತ್ತಿದ್ದ ಆರೋಪಿ, ನಂತರ ಮನೆಯಲ್ಲೇ ಇಟ್ಟುಕೊಂಡಿದ್ದ ನಕಲಿ ಕೀ ತಯಾರಿಕಾ ಯಂತ್ರದ ಮೂಲಕ ನಕಲಿ ಕೀಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದ. ಕೆಲ ದಿನಗಳ ಬಳಿಕ ಆ ನಿರ್ದಿಷ್ಟ ಮನೆ ಸಮೀಪದ ನಾಲ್ಕೈದು ಬಾರಿ ಸಂಚರಿಸಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನಕಲಿ ಕೀ ಬಳಸಿ ಕೃತ್ಯ ಎಸಗುತ್ತಿದ್ದ.
ಯೂಟ್ಯೂಬ್ ನೋಡಿ ಕೀಲಿ ತಯಾರು: ಯುಟ್ಯೂಬ್ ನೋಡಿ ನಕಲಿ ಕೀ ತಯಾರು ಮಾಡುವುದನ್ನು ಕರಗತ ಮಾಡಿಕೊಂಡಿರುವ ಆರೋಪಿ ಸುಮಾರು ಹದಿನೈದು ವರ್ಷಗಳಿಂದ ಮನೆ ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ವಕೀಲರಿಗೆ 9 ಲಕ್ಷ ರೂ. ಶುಲ್ಕ: ಹದಿನೈದು ವರ್ಷಗಳಿಂದ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಆರೋಪಿ ಪ್ರಕಾಶ್, ತನ್ನ ಪರ ವಾದ ಮಂಡಿಸುವ ವಕೀಲರಿಗೆ ಇದುವರೆಗೂ ಒಂಬತ್ತು ಲಕ್ಷಕ್ಕೂ ಅಧಿಕ ಶುಲ್ಕ ಕೊಟ್ಟಿರುವುದಾಗಿ ಹೇಳಿಕೆ ನೀಡಿರುವುದಾಗಿ ಸುದ್ದಗುಂಟೆಪಾಳ್ಯ ಪೊಲೀಸರು ಹೇಳಿದರು.