ದೊಡ್ಡಬಳ್ಳಾಪುರ: ನಾಡಬಾಂಬ್ ಬಳಸಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದ್ದ ಓರ್ವನನ್ನು ಮಂಗಳವಾರ ಸಂಜೆ ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಆತನಿಂದ ಬರೋಬ್ಬರಿ 27ನಾಡಬಾಂಬ್(ಸಿಡಿಮದ್ದು) ಸೇರಿದಂತೆ ಉರುಳುಗಳನ್ನು ವಶಕ್ಕೆ ಪಡೆದಿದ್ದಾರೆ.
ಬ್ಯಾಡರಹಳ್ಳಿ ಗ್ರಾಮದ ಮುತ್ತುರಾಜು (27) ಬಂಧಿತ ಆರೋಪಿ. ಈತ, ತಾಲೂಕಿನ ಸಾಸಲು ಹೋಬಳಿ ವ್ಯಾಪ್ತಿಯ ಮುದ್ದೇನಹಳ್ಳಿ ಮೀಸಲು ಅರಣ್ಯಪ್ರದೇಶದ ಚೀಲೇನಹಳ್ಳಿ ಅರಣ್ಯದಲ್ಲಿ ಬೇಟೆಯಾಡಲು ಮುಂದಾಗಿದ್ದ.
ತಿಪ್ಪೂರು ಬಳಿಯ ಅರಣ್ಯದಲ್ಲಿ ಅರಣ್ಯ ಸಿಬ್ಬಂದಿ ಹುಲಿ ಗಣತಿ ನಡೆಸುತ್ತಿದ್ದರು. ಮಾಹಿತಿ ಅರಿಯದ ಮುತ್ತುರಾಜ್ ಸಂಜೆಯಾಗುತ್ತಿದ್ದಂತೆ ನಾಡಬಾಂಬ್‌ನೊಂದಿಗೆ ಪ್ರಾಣಿಗಳನ್ನು ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿದಾಗ ಬೇಟೆಯಾಡಲು ನಾಡಬಾಂಬ್‌ನೊಂದಿಗೆ ಬಂದಿರುವುದು ಬಹಿರಂಗವಾಗಿದೆ. ಕೂಡಲೇ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಪ್ರಾಣಿಗಳ ಬೇಟೆ ಹೇಗೆ?: ಅರಣ್ಯದಲ್ಲಿ ಕಾಡುಪ್ರಾಣಿಗಳು ಓಡಾಡುವ ಆಯಾ ಕಟ್ಟಿನ ಜಾಗದಲ್ಲಿ ನಾಡಬಾಂಬ್‌ಗಳನ್ನು ಹುದುಗಿಸಲಾಗುತ್ತದೆ. ಪ್ರಾಣಿಗಳು ನಾಡಬಾಂಬ್‌ನ್ನು ತುಳಿದ ಕ್ಷಣವೇ ಸ್ಫೋಟಗೊಂಡು ಸಾವನ್ನಪ್ಪುತ್ತವೆ. ಮೃತಪ್ರಾಣಿಗಳನ್ನು ಹೊತ್ತೂಯ್ಯಲಾಗುತ್ತದೆ.
ದೊಡ್ಡಬಳ್ಳಾಪುರ ಉಪವಲಯ ಅರಣ್ಯಾಧಿಕಾರಿ ರಾಜಶೇಖರ್ ಮಾಹಿತಿ ನೀಡಿ, ಕಾಡುಪ್ರಾಣಿಗಳ ಬೇಟೆ ಕುರಿತು ಹಲವು ರೈತರು ಇಲಾಖೆಗೆ ದೂರು ನೀಡಿದ್ದರು. ಈಗ ಓರ್ವ ಬಂಧಿಯಾಗಿದ್ದು, ವಿಚಾರಣೆ ಬಳಿಕ ಇನ್ನೂ ಮತ್ತಿತರು ಸಿಗುವ ಸಾಧ್ಯತೆಯಿದೆ ಎಂದರು. ಕಾರ್ಯಾಚರಣೆಯಲ್ಲಿ ಶ್ರೀನಿವಾಸರಾಯಪಲ್ಲಿ, ಕಿರಣ್‌ಕುಮಾರ್, ಅಯ್ನಾಳಪ್ಪ, ಸಂಜಯ್‌ಕುಮಾರ್ ಇದ್ದರು.