Advertisement

Captain Pranjal ಆಡಿ ಬೆಳೆದ ಮೈದಾನದಲ್ಲೇ ವೀರ ನುಡಿನಮನ

12:19 AM Nov 26, 2023 | Team Udayavani |

ಸುರತ್ಕಲ್‌: ಉಗ್ರರೊಂದಿಗಿನ ಕಾದಾಟದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್‌ ಪ್ರಾಂಜಲ್‌ ಅವರಿಗೆ ಅವರು ಆಡಿಬೆಳೆದ ಗಣೇಶಪುರದ ಮೈದಾನದಲ್ಲೇ ದೇಶ ಭಕ್ತರಿಂದ ಗೌರವಾರ್ಪಣೆ “ವೀರ ನುಡಿನಮನ’ ಶನಿವಾರ ಸಂಜೆ ನಡೆಯಿತು. ಸೇರಿದ ಎಲ್ಲರ ಮುಖದಲ್ಲೂ ದುಃಖ ಮಡುಗಟ್ಟಿತ್ತು. ಕ್ಯಾ| ಪ್ರಾಂಜಲ್‌ಅವರನ್ನು ಬಾಲ್ಯದಿಂದಲೇ ಕಂಡು ಮಾತನಾಡಿದವರು “ಇದು ನಂಬಲಸಾಧ್ಯ ಘಟನೆ’ ಎಂದು ಉದ್ಗರಿಸುತ್ತಿದ್ದರು.

Advertisement

ಮೊದಲಿಗೆ ಎಂಆರ್‌ಪಿಎಲ್‌ನ ಬಿಎಎಸ್‌ಎಫ್‌ ಯೋಧರು ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಿಐಎಸ್‌ಎಫ್‌ ಡೆಪ್ಯುಟಿ ಕಮಾಂಡೆಂಟ್‌ ವಿಕ್ರಂ ಅವರು, ಪ್ರಾಂಜಲ್‌ ಮದುವೆಯಲ್ಲಿ ಭಾಗಿಯಾಗಿ ಸಂಭ್ರಮವನ್ನು ಕಂಡ ನನಗೆ ಇದೀಗ ಅವರಿಗೆ ನುಡಿನಮನದಲ್ಲಿ ಭಾಗವಹಿಸುವ ದುಃಖ, ಇನ್ನೊಂದೆಡೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ವೀರನ ಬಗ್ಗೆ ಗೌರವ ಮೂಡುತ್ತಿದೆ. ಇವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಲಭಿಸಲಿ ಎಂದರು.

ದೇಶಕ್ಕೆ ಮುಡಿಪಾದ ಜೀವನ
ನಮ್ಮ ಮಣ್ಣಿನ ಮಗ, ವಿದ್ಯಾಭ್ಯಾಸ ಮಾಡುವ ಸಂದರ್ಭ 3ನೇ ತರಗತಿಯಿಂದ ಸೈನ್ಯ ಸೇರುವ ಆಸೆಯನ್ನು ಗುರಿಯಾಗಿಸಿ ಛಲದಿಂದ ಈಡೇರಿಸಿಕೊಂಡರು. ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ವೀರ ಸೇನಾನಿ ಪ್ರಾಂಜಲ್‌ ಎಂದು ಎಂಆರ್‌ಪಿಎಲ್‌ನ ದಯಾನಂದ ಪ್ರಭು ಸ್ಮರಿಸಿಕೊಂಡರು.

ಆರ್‌ಎಸ್‌ಎಸ್‌ ಪ್ರಮುಖರಾದ ಪ್ರಕಾಶ್‌ ಪಿ. ಮಾತನಾಡಿ, ದೇಶದ ಏಳಿಗೆಗಾಗಿ ಉನ್ನತಿಗಾಗಿ, ನಮ್ಮೆಲ್ಲರ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ನಮ್ಮ ನಡುವೆಯೇ ಇದ್ದ ಕ್ಯಾ| ಪ್ರಾಂಜಲ್‌ ಈಗ ಇಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದರು.

ಕ್ಯಾ| ಪ್ರಾಂಜಲ್‌ ಮನಸ್ಸು ಮಾಡಿದ್ದರೆ ಹಣ ಗಳಿಸುವ ಯಾವುದೇ ಉದ್ಯೋಗ ಮಾಡುವ ಅವಕಾಶವಿತ್ತು. ಆದರೆ ಎಳೆ ವಯಸ್ಸಿನಲ್ಲೇ ಸೈನ್ಯ ಸೇರುವ ಹಂಬಲವಿದ್ದ ಅವರ ಕನಸು ಏನೆಂಬುದು ದೇಶದ 140 ಕೋಟಿ ಜನ ಇಂದು ಅರ್ಥ ಮಾಡಿಕೊಳ್ಳುವಂತಾಗಿದೆ. ಇವರ ಈ ನಡೆ, ಜೀವನ ಕೋಟ್ಯಂತರ ಭಾರತೀಯರಿಗೆ ಪ್ರೇರಣೆಯಾಗಿ ಉಳಿಯಲಿದೆ ಎಂದರು.

Advertisement

ಮಂಗಳೂರು ಮಾನಗರ ಪಾಲಿಕೆ ಮೇಯರ್‌ ಸುಧೀರ್‌ ಕಣ್ಣೂರು, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮಹಾನಗರ ಪಾಲಿಕೆ ಉಪಮೇಯರ್‌ ಸುನೀತಾ, ಮಹಾನಗರ ಪಾಲಿಕೆ ಸದಸ್ಯರಾದ ಲೋಕೇಶ್‌ ಬೊಳ್ಳಾಜೆ, ಸರಿತಾ ಶಶಿಧರ, ವೇದಾವತಿ ಕಾಟಿಪಳ್ಳ ಅಭ್ಯುದಯ ಟ್ರಸ್ಟ್‌ ಅಧ್ಯಕ್ಷ ಜಯಕುಮಾರ್‌, ಕರ್ಮಚಾರಿ ಸಂಘದ ಉಪಾಧ್ಯಕ್ಷರಾದ ಸುರೇಶ್‌ ಪೊಸ್ರಾಲ್‌, ಪ್ರಸಾದ್‌ ಅಂಚನ್‌, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್‌, ಸುನೀಲ್‌ ಬೋಳ, ಸುರೇಶ್‌ ಮಾಜಿ ಅಧ್ಯಕ್ಷ ಪ್ರವೀಣ್‌ ಕೃಷ್ಣಾಪುರ, ಚೇಳಾçರು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ, ಪ್ರಮುಖರಾದ ವಾದಿರಾಜ್‌ ರಾವ್‌, ಜಯಪ್ರಕಾಶ್‌ ಸೂರಿಂಜೆ, ವಸಂತರಾವ್‌ ಮೊದಲಾದವರು ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.

ಶಾರದಾ ವಿದ್ಯಾಲಯದಲ್ಲಿ ಕ್ಯಾ| ಪ್ರಾಂಜಲ್‌ಗೆ ಶ್ರದ್ಧಾಂಜಲಿ
ಮಂಗಳೂರು: ಉಗ್ರರ ಗುಂಡಿಗೆ ಎದೆಯೊಡ್ಡಿ ದೇಶಕ್ಕಾಗಿ ಹುತಾತ್ಮರಾಗಿರುವ ಕ್ಯಾ| ಪ್ರಾಂಜಲ್‌ ಅವರಿಗೆ ಶಾರದಾ ವಿದ್ಯಾಲಯದ ಎನ್‌ಸಿಸಿ ಕೆಡೆಟ್‌ಗಳ ಉಪಸ್ಥಿತಿಯಲ್ಲಿ, ಎನ್‌ಸಿಸಿ ಡೇ ಆಚರಣೆಯ ಸಂದರ್ಭ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಮತ್ತು ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ದಯಾನಂದ ಕಟೀಲು ಉಪಸ್ಥಿತರಿದ್ದರು.

ಸಾರ್ವಜನಿಕರಿಂದ ಪುಷ್ಪಾರ್ಚನೆ
ಉಗ್ರರೊಂದಿಗಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಕ್ಯಾ| ಪ್ರಾಂಜಲಂ ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಮಂದಿ ಗೌರವ ಸಲ್ಲಿಸಿದರು.

ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಅಮರ್‌ ರಹೇ ಪ್ರಾಂಜಲ್‌, ಭಾರತ್‌ ಮಾತಾ ಕೀ ಜೈ ಘೋಷಣೆ ಮುಗಿಲು ಮುಟ್ಟಿತ್ತು. ಸಾರ್ವಜನಿಕರು, ಸಂಘ ಸಂಸ್ಥೆಗಳವರು ಮತ್ತು ಶಾಲಾ ಕಾಲೇಜಿನ ಮಕ್ಕಳು ವಿವಿಧೆಡೆ ಪುಷ್ಪಾರ್ಚನೆ ನಡೆಸುವ ಮೂಲಕ ವೀರ ಯೋಧನಿಗೆ ಅಂತಿಮ ವಿದಾಯ ಹೇಳಿದರು.

ಭಾವುಕರಾದ ಕರಾವಳಿಗರು
ಆನೇಕಲ್‌ನಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯುತ್ತಿದ್ದರೆ, ಕ್ಯಾ| ಪ್ರಾಂಜಲ್‌ ಅವರು ಕಲಿತಿರುವ ಸುರತ್ಕಲ್‌ ಮತ್ತು ಮಂಗಳೂರಿ ನಲ್ಲಿಯೂ ಜನರು ಭಾವುಕರಾದರು. ಬೆಳಗ್ಗೆ 7 ಗಂಟೆಯಿಂದಲೇ ಅಪರಾಹ್ನದವರೆಗೆ ಟಿವಿಯಲ್ಲಿ ನೇರ ಪ್ರಸಾರವನ್ನು ಜನರು ನೋಡಿದರು. ಪ್ರಾಂಜಲ್‌ ಅವರ ಕೆಲವು ಸ್ನೇಹಿತರು ಬೆಂಗಳೂರಿಗೆ ತೆರಳಿ ಅಲ್ಲಿ ಅಂತಿಮ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next