Advertisement
ಕ್ಯಾ| ಹನೀಫುದ್ದೀನ್ 23 ಆಗಸ್ಟ್ 1974ರಲ್ಲಿ ಹೊಸದಿಲ್ಲಿಯಲ್ಲಿ ಜನಿಸಿದರು. ಇವರು 8 ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದವರು. ತಾಯಿ ಹೇಮಾ ಅಜೀಜ್ ಅವರು ಸಂಗೀತ ನಾಟಕ ಅಕಾಡೆಮಿ ಮತ್ತು ಹೊಸದಿಲ್ಲಿಯ ಕಥಕ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಹನೀಫರು ಹೊಸದಿಲ್ಲಿಯ ಶಿವಾಜಿ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದು ಬಳಿಕ ಕಂಪ್ಯೂಟರ್ ತರಬೇತಿ ಪಡೆದರು. ಜತೆಗೆ ಇವರು ಪ್ರತಿಭಾವಂತ ಗಾಯಕರಾಗಿದ್ದರು. ಶಾಲಾ- ಕಾಲೇಜು ದಿನಗಳಲ್ಲಿ ಹನೀಫ್ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿ. ಜತೆಗೆ ಶಿಸ್ತು, ಸಂಯಮ ಬೆಳೆಸಿಕೊಂಡ ಕಾರಣ ಇವರು “ಮಿಸ್ಟರ್’ ಎಂದೇ ಹೆಸರುವಾಸಿಯಾಗಿದ್ದರು.
Related Articles
Advertisement
ಕಾರ್ಗಿಲ್ ಯುದ್ಧದ ಆರಂಭಿಕ ದಿನಗಳು ಶತ್ರುಪಡೆಗಳ ಬಗ್ಗೆ ಕಡಿಮೆ ಮಾಹಿತಿ ಲಭ್ಯವಿದ್ದಾಗ 11 ರಾಜ ರಿಫ್ ಕಂಪೆನಿಯಿಂದ ಜೂನ್ 6 ರಂದು ಆಪರೇಷನ್ ಥಂಡಬೋಲ್ಟನ್ನು ಅಳವಡಿಸಲಾಯಿತು. 18,000 ಅಡಿ ಎತ್ತರದ ತುರ್ತುಕ್ ಪ್ರದೇಶದಲ್ಲಿ ಶತ್ರುಗಳ ಪಡೆಗಳ ಚಲನವಲನಗಳ ಮೇಲೆ ಸೇನೆಯೂ ಹದ್ದಿನ ಕಣ್ಣು ಇಡುವುದೇ ಇದರ ಉದ್ದೇಶವಾಗಿತ್ತು. ಅಲ್ಲದೇ ಈ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಸೇನೆಯ ಉದ್ದೇಶವಾಗಿತ್ತು. ಯುದ್ಧದ ಆರಂಭಿಕ ಹಂತದಲ್ಲಿ ಸೈನಿಕರಿಗೆ ಕಾರ್ಯತಂತ್ರ ಕಾರ್ಯಾಚರಣೆ ನೀಡಲು ಕ್ಯಾಪ್ಟನ್ ಹನೀಫ್ರಿಗೆ ವಹಿಸಲಾಗಿತ್ತು. ಅವರು ತಮ್ಮ ಕಿರಿಯ ನಿಯೋಜಿತ ಅಧಿಕಾರಿಗಳು ಮತ್ತು ಇತರ ಮೂರು ಶ್ರೇಣಿಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆಗೆ ಸಿದ್ಧರಾದರು.
ಸುಮಾರು ನಾಲ್ಕು ರಾತ್ರಿಗಳ ವರೆಗೆ ನಿರಂತರ ಕಾರ್ಯಾಚರಣೆ ಮಾಡುವ ಮೂಲಕ ಆ ಸ್ಥಳವನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಶತ್ರು ಸೈನಿಕರಿಗೆ ಹಾಗೂ ಧೀರೋದಾತ್ತ ಭಾರತೀಯ ಸೈನಿಕರ ನಡುವೆ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆಯಿತು. ಭಾರತೀಯ ಸೈನಿಕರಿಗೆ ತೀವ್ರ ಗಾಯಗಳಾಗಿದ್ದವು. ಕ್ಯಾಪ್ಟನ್ ಹನೀಫ್ರು ನಿರಂತರ ಹೋರಾಟದ ಜತೆಗೆ ಅವರು ತಮ್ಮ ಸಹ ಸೈನಿಕರ ಸುರಕ್ಷೆಯ ಬಗ್ಗೆಯೂ ಆಲೋಚಿಸುತ್ತಿದ್ದರು. ನಿರಂತರ ಹೋರಾಟದ ಫಲವಾಗಿ ಒಂದು ಪ್ರದೇಶವನ್ನು ವಶಪಡಿಸಿಕೊಂಡರು. ಅಂತೆಯೇ ಇನ್ನೊಂದು ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರು, ಆದರೆ ಕ್ಯಾ|ಹನೀಫ್ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಯಾವುದೇ ಯುದ್ಧೋತ್ಸಾಹ ಅವರ ಮುಖದಲ್ಲಿ ಕಳೆಗುಂದಿರಲಿಲ್ಲ. ಮುಂದೆ ಹೋರಾಡುತ್ತ ವೀರಪುತ್ರ ಕ್ಯಾ| ಹನೀಫ್ ರಣರಂಗದಲ್ಲೇ ಹುತಾತ್ಮರಾದರು. ತಾಯಿ ಭಾರತೀ ಮಡಿಲಲ್ಲಿ ವೀರಪುತ್ರನೂ ಬೆಚ್ಚಗೆ ಮಲಗಿದನು. ಆದರೆ ಆತನ ಧೈರ್ಯ, ಸಾಹಸ, ದೇಶಪ್ರೇಮ, ಹೋರಾಟದ ಕಿಚ್ಚು ಸದಾ ಜಾಗೃತವಾಗಿತ್ತು. ಕೋಟ್ಯಂತರ ಯುವಕರಿಗೆ ಆದರ್ಶ, ಸ್ಫೂರ್ತಿಯಾಗಿತ್ತು.
ವೀರಪುತ್ರನ ತಾಯಿಯ ಮಾತು :
“ನನ್ನ ಮಗ ದೇಶದ ಹೆಮ್ಮೆ ಮತ್ತು ತನ್ನ ದೇಶಕ್ಕಾಗಿ ಸಂಪೂರ್ಣ ಸೇವೆಯನ್ನು ಸಲ್ಲಿಸಿದ್ದನು ಶತ್ರುಗಳ ವಿರುದ್ಧ ಹೋರಾಡುವಾಗ ಬಂದ ಮರಣಕ್ಕಿಂತ ಅವನ ಶೌರ್ಯದ ಬಗ್ಗೆ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರೆ, ಮತ್ತೂಂದು ಕಡೆ ಅವರ ಕಿರಿಯ ತಮ್ಮ ಸಮೀರ ಹೀಗೆ ಬರೆಯುತ್ತಾರೆ” ಹೈ ಸಚ್ ಸಾರಿ ಜಿಂದಗಿಕಾ ಇಸ್ ಪಲಮೆ ಜಿಲೋ ಯಾರೋ ಯಹಾ ಕಲ ಕಿಸನೆ ದೇಖಾ” ಈ ಸಾಲುಗಳ ಮೂಲಕ ಅವರ ಅಣ್ಣನ ಇರುವಿಕೆಯನ್ನು ಅವರು ಸದಾ ಕಾಣುತ್ತಿರುತ್ತಾರೆ ಇಂತಹ ದೇಶ ಭಕ್ತನಿಗೊಂದು ಸಲಾಂ.
ಸಾಹಸಕ್ಕೆ ಸಂದ ಗರಿ :
ಕ್ಯಾ| ಹನೀಫುದ್ದೀನ್ ಅವರ ಧೈರ್ಯ, ಸಾಹಸವನ್ನು ಗುರುತಿಸಿ ಇವರಿಗೆ ಭಾರತ ಸರಕಾರವು ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಸೇವಾ ಸಂಖ್ಯೆ: ಐಸಿ 57290
ಸೇವಾ ವರ್ಷ: 1997-1999
ಬೆಟಾಲಿಯನ್: ರಜಪೂತ್ ರೈಫಲ್
ಪ್ರಶಸ್ತಿ: ವೀರ ಚಕ್ರ
ಕಾರ್ಯಾಚರಣೆ: ಆಪರೇಷನ್ ವಿಜಯ
ಭಾಗ್ಯಶ್ರೀ ಎಸ್ ಆರ್.
ಧಾರವಾಡ