Advertisement

ಶತ್ರು ರಾಷ್ಟ್ರದೊಂದಿಗೆ ಕಾಂಗ್ರೆಸ್ ಸಂವಾದ : ಇದು ರಾಷ್ಟ್ರ ವಿರೋಧಿ ಚಿಂತನೆ ; ಕಾರ್ಣಿಕ್

07:14 PM Jan 04, 2022 | Team Udayavani |

ಬೆಂಗಳೂರು : ಚೀನಾ ಗಡಿ ವಿಚಾರದಲ್ಲಿ ಪದೇಪದೇ ಸುಳ್ಳು ಸುದ್ದಿ ಹಬ್ಬಿಸಿ ಜನಮಾನಸದಲ್ಲಿ ಗೊಂದಲ ಸ್ರಷ್ಟಿ ಮಾಡುವುದನ್ನು ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಬೇಜವಾಬ್ದಾರಿಯ ರಾಷ್ಟ್ರವಿರೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಎಂದು ರಾಜ್ಯ ಬಿಜೆಪಿ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.

Advertisement

ರಾಷ್ಟ್ರೀಯ ಪಕ್ಷವೊಂದು ಶತ್ರುರಾಷ್ಟ್ರದ ರಾಜಕೀಯ ಪಕ್ಷದ ಜೊತೆಗೆ ಮಾಡಿಕೊಂಡಿರುವ ಅನೈತಿಕ ಒಪ್ಪಂದದ ವಿವರಗಳನ್ನು ರಾಷ್ಟ್ರದ ಜನತೆಯಿಂದ ಮುಚ್ಚಿಟ್ಟಿರುವ ಕಾಂಗ್ರೆಸ್ ಪಕ್ಷ, ತನ್ನ ಎಡಬಿಡಂಗಿತನವನ್ನು ರಾಹುಲ್ ಗಾಂಧಿಯವರ ಮೂಲಕ ಮುಂದುವರೆಸುತ್ತಿರುವುದು ರಾಷ್ಟ್ರೀಯ ದುರಂತ.

ರಾಷ್ಟ್ರ ಮಟ್ಟದ ಯಾವುದೇ ಅಧಿಕೃತ ಜವಾಬ್ದಾರಿ ಹೊಂದಿರದಿದ್ದರೂ ಶತ್ರುರಾಷ್ಟ್ರದ ರಾಯಭಾರಿಗಳೊಂದಿಗೆ ಕದ್ದುಮುಚ್ಚಿ ಸಂವಾದ ನಡೆಸುತ್ತಿರುವುದು ರಾಷ್ಟ್ರವಿರೋಧಿ ಚಿಂತನೆಗೆ ಸಾಕ್ಷಿ.

ಗಾಲ್ವಾನ್ ಬಿಕ್ಕಟ್ಟಿನ ಸಂದರ್ಭದಲ್ಲೂ ಅನಗತ್ಯ ಕಪೋಲಕಲ್ಪಿತ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಮಾಡಿ, ಸೈನಿಕರ ರಾಷ್ಟ್ರಭಕ್ತಿ, ತ್ಯಾಗ,ಬಲಿದಾನ ಮತ್ತು ಬದ್ಧತೆಯನ್ನು ಪ್ರಶ್ನೆ ಮಾಡಿದ ರಾಹುಲ್ ಗಾಂಧಿಯವರ ಇಂದಿನ ಹೇಳಿಕೆ ಅವರ ಬಾಲಿಶತನಕ್ಕೆ ಕೈಗನ್ನಡಿ ಎಂದು ಅವರು ತಿಳಿಸಿದ್ದಾರೆ.

ನೆಹರೂ ಅವರ ಮರಿ ಮೊಮ್ಮಗನಾದ ರಾಹುಲ್ ಗಾಂಧಿ ನೆಹರೂರವರ ಅಂದಿನ ದುಸ್ಸಾಹಸ ಇಂದಿಗೂ ದೇಶದ ಪಾಲಿಗೆ ಮಗ್ಗಲಿನ ಮುಳ್ಳಾಗಿ ಕಗ್ಗಂಟಾಗಿರುವುದನ್ನು ಮರೆತಂತಿದ್ದು, ರಾಷ್ಟ್ರ ಮೊದಲು ಎನ್ನುವ ವಿಚಾರಕ್ಕೆ ವಿರುದ್ಧವಾಗಿ ಶತ್ರುರಾಷ್ಟ್ರವನ್ನೇ ಓಲೈಸುವತ್ತ ಮುಂದಾಗಿರುವುದು ಅವರ ಗೊಂದಲದ ಮನಸ್ಸಿನ ಪ್ರತೀಕ ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ :ಕೊರೊನಾದಿಂದ ಯಾವ ದೇಶವೂ ಮುಕ್ತವಾಗಿಲ್ಲ: ಶಾಸಕ ಡಾ.ಜಿ.ಪರಮೇಶ್ವರ

ಭಾರತ ಮತ್ತು ಚೀನಾದ ಗಡಿಯನ್ನು ಗಡಿ ಎಂದು ಕರೆಯದೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‍ಎಸಿ) ಎಂದು ಯಾಕೆ ಕರೆಯಲಾಗುತ್ತಿದೆ ಎನ್ನುವುದರ ಕುರಿತು ಸ್ವಲ್ಪವಾದರೂ ಪರಿಜ್ಞಾನವಿದ್ದಲ್ಲಿ ಈ ರೀತಿಯ ಅಪ್ರಬುದ್ಧ ಹೇಳಿಕೆಗಳನ್ನು ನೀಡಲು ಸನ್ಮಾನ್ಯ ರಾಹುಲ್ ಗಾಂಧಿಯವರು ಮುಂದಾಗುತ್ತಿರಲಿಲ್ಲ. ಕಾಂಗ್ರೆಸ್‍ನಲ್ಲಿ ಅಳಿದುಳಿದಿರುವ ಕೆಲವಾದರೂ ಹಿರಿಯ ನಾಯಕರುಗಳು ಈ ಕುರಿತಾಗಿ ರಾಹುಲ್ ಗಾಂಧಿಯವರಿಗೆ ತಿಳುವಳಿಕೆ ನೀಡುವುದು ಸೂಕ್ತ ಎಂದು ಭಾವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಹೇಳಿಕೆ ನೀಡುವಾಗ ಅಧಿಕಾರದಲ್ಲಿರುವ ಸರಕಾರದ ನಿರ್ಣಯಗಳಿಗೆ ಪೂರಕವಾಗಿ ಹೇಳಿಕೆ ನೀಡಬೇಕಾಗಿರುವುದು ರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರು ಇದನ್ನು ಅನುಸರಿಸಬೇಕೆಂದು ದೇಶದ ಜನತೆಯ ಪರವಾಗಿ ಆಗ್ರಹಿಸುತ್ತಾ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿಯವರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಈ ರೀತಿಯ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿ ಅಪಹಾಸ್ಯಕ್ಕೀಡಾಗದಿರುವಂತೆ ಆಗ್ರಹಿಸುತ್ತೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next