ಚಂಡೀಗಢ/ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕ್ಯಾ.ಅಮರೀಂದರ್ ಸಿಂಗ್ ಅವರ ನಡೆ ಹಲವು ಕುತೂಹಲಗಳಿಗೆ ಕಾರಣವಾಗುತ್ತಿದೆ. ಬುಧವಾರ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕಾಂಗ್ರೆಸ್ ನ ಜಿ-23 ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನ ಜಿ-23 ನಾಯಕರ ಗುಂಪು ಕೂಡ ರಾಜ್ಯದಲ್ಲಿನ ಬಿಕ್ಕಟ್ಟನ್ನು ವರಿಷ್ಠರು ನಿಭಾಯಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರಾದ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಕೂಡಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲೂಸಿ) ಸಭೆ ಕರೆಯಬೇಕೆಂದು ಒತ್ತಾಯಿಸಿದ್ದಾರೆ.
ಪಂಜಾಬ್ ಬಿಕ್ಕಟ್ಟಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಮಾಜಿ ಸಚಿವ ಕಪಿಲ್ ಸಿಬಲ್, ಕೂಡಲೇ ಸಿಡಬ್ಲೂಸಿ ಸಭೆ ಕರೆಯಬೇಕೆಂದು ಒತ್ತಾಯಿಸಿ ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಜಿ 23 ನಾಯಕರ ತಂಡವೆಂದರೆ “ಜಿ ಹುಜೂರ್’ ತಂಡವಲ್ಲ. ಪಕ್ಷದ ಶ್ರೇಯೋಭಿವೃದ್ಧಿಗಾಗಿ ಸಲಹೆಗಳನ್ನು ಮುಂದಿನ ದಿನಗಳಲ್ಲಿಯೂ ನೀಡಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಬಲಗೊಳ್ಳಬೇಕಾಗಿದೆ. ಪಂಜಾಬ್ ಬಿಕ್ಕಟ್ಟಿನಿಂದ ಪಾಕಿಸ್ತಾನ, ಐಎಸ್‌ಐಗೆ ಲಾಭವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ರೇಣುಕಾಚಾರ್ಯ, ಜೀವರಾಜ್ ನೇಮಕ: ಸಂಪುಟ ದರ್ಜೆ ಸ್ಥಾನಮಾನ
ಗಾಂಧಿ ಕುಟುಂಬದವರ ವಿರುದ್ಧ ಸಿಬಲ್ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬುಧವಾರ ಸಂಜೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ಬೆಳವಣಿಗೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಜಿ -23 ನಾಯಕರನ್ನು ಭೇಟಿಯಾಗುತ್ತಿರುವುದು ಮತ್ತೊಂದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಸಮಯದಲ್ಲಿ ಕಾಂಗ್ರೆಸ್ ನ ನಡೆ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ನಡೆಯ ಮೇಲೆ ವಿಪಕ್ಷಗಳೂ ಕಣ್ಣಿಟ್ಟಿವೆ.